ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೆತುವೆ ಬಳಿಯಲ್ಲಿ ಸೆಲ್ಫಿ ತೆಗೆದುಕೊಳ್ತಿದ್ದ ನಾಲ್ವರು ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ ಘಟನೆಯು ವರದಿಯಾಗಿದೆ.
ರೈಲ್ವೆ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸಂಜೆ ಐದು ಗಂಟೆ ಸುಮಾರಿಗೆ ಬಸಾಯಿ ರೈಲ್ವೆ ನಿಲ್ದಾಣಕ್ಕೆ ದೆಹಲಿಯ ಸರಾಯ್ ರೋಹಿಲ್ಲಾ ನಿಲ್ದಾಣದಿಂದ ಹೊರಟಿದ್ದ ಅಜ್ಮೀರ್ ಬೌಂಡ್ ಜನ್ಮ ಶತಾಬ್ದಿ ಟ್ರೇನಿಗೆ ಸಿಲುಕಿ ಈ ಯುವಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ನಾಲ್ಕೂ ಮಂದಿ 18 ರಿಂದ 21 ವರ್ಷ ಪ್ರಾಯದವರು ಎಂದು ತಿಳಿದುಬಂದಿದೆ. ಸೆಲ್ಫಿಯಲ್ಲಿ ರೈಲು ಕೂಡ ಸೆರೆಯಾಗಬೇಕು ಎಂದುಕೊಂಡಿದ್ದ ಈ ಯುವಕರು ರೈಲ್ವೆ ಹಳಿಯ ಮೇಲೆಯೇ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದರು. ರೈಲು ಹತ್ತಿರ ಬಂದಿರುವುದು ಗಮನಕ್ಕೆ ಬಂದಿದ್ದರೂ ಸಹ ಫೋಟೋದಲ್ಲಿ ರೈಲು ಕೂಡ ಕಾಣಿಸುತ್ತದೆ ಎಂಬ ಕಾರಣಕ್ಕೆ ಸೆಲ್ಫಿ ಕ್ಲಿಕ್ಕಿಸುತ್ತಲೇ ಇದ್ದರು ಎನ್ನಲಾಗಿದೆ.
ಘಟನಾ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದಾರೆ. ರೈಲು ಚಾಲಕ ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರೈಲ್ವೆ ಇಲಾಖೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರನ್ನು 19 ವರ್ಷದ ಸಮೀರ್, 20 ವರ್ಷದ ಮೊಹಮ್ಮದ್ ಅನಾಸ್, 21 ವರ್ಷದ ಯುಸೂಫ್ ಅಲಿಯಾ ಭೋಲಾ ಹಾಗೂ 18 ವರ್ಷದ ಯುವರಾಜ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ದೇವಿಲಾಲ್ ಕಾಲೋನಿಯ ನಿವಾಸಿಗಳು ಎನ್ನಲಾಗಿದೆ.