ನವದೆಹಲಿ: ದೆಹಲಿ-ಜೈಪುರ ಹೆದ್ದಾರಿಯ ಗುರುಗ್ರಾಮ್ ನ ಸಿದ್ರಾವಲಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಕಾರ್ ಮತ್ತು ಪಿಕಪ್ ವ್ಯಾನ್ ಗೆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಲಾಸ್ಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ವಿನೋದ್ ಕುಮಾರ್ ಪ್ರಕಾರ, ಜೈಪುರದಿಂದ ಬರುತ್ತಿದ್ದ ತೈಲ ಟ್ಯಾಂಕರ್ ಡಿವೈಡರ್ ದಾಟಿ ಕಾರ್ ಗೆ ಡಿಕ್ಕಿ ಹೊಡೆದಿದೆ. ಕಾರ್ ನೊಳಗಿದ್ದ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಸಿಎನ್‌ಜಿ) ಸಿಲಿಂಡರ್‌ಗಳಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘರ್ಷಣೆಯ ನಂತರ ಬೆಂಕಿಯಿಂದಾಗಿ ಅಪಘಾತವು ಎಲ್ಲಾ ಮೂವರು ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿತು.
ಒಳಗಿದ್ದ ಪ್ರಯಾಣಿಕರು ಬಹುಶಃ ಜೈಪುರಕ್ಕೆ ಪ್ರಯಾಣಿಸುತ್ತಿದ್ದರು. ಕಾರ್ ಗೆ ಡಿಕ್ಕಿ ಹೊಡೆದ ನಂತರ ಆಯಿಲ್ ಟ್ಯಾಂಕರ್ ಹೆದ್ದಾರಿಯಲ್ಲಿ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದು, ವ್ಯಾನ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ-ಜೈಪುರ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ನಾವು ಸ್ಥಳವನ್ನು ತಲುಪಿದಾಗ ಒಂದು ಕಾರ್ ಬೆಂಕಿಯಿಂದ ಸುಟ್ಟುಹೋಗಿದೆ. ಮೂವರು ಜನರು ಸಾವನ್ನಪ್ಪಿದ್ದಾರೆ. ನಂತರ, ತೈಲ ಟ್ಯಾಂಕರ್ ಡಿಕ್ಕಿ ಹೊಡೆದು ಪಿಕಪ್ ವ್ಯಾನ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿ ತೈಲ ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಪ್ರಯತ್ನ ನಡೆಸಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಐಒ ಕುಮಾರ್ ಹೇಳಿದರು.