ಹರಿದ ಜೀನ್ಸ್ ಉಡುಗೆ ಕುರಿತ ವಿಚಾರಕ್ಕೆ ಈ ಹಿಂದೆ ತೀವ್ರ ವಿವಾದಕ್ಕೆ ಗ್ರಾಸವಾಗಿದ್ದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಇದೀಗ ಮತ್ತೊಮ್ಮೆ ಜೀನ್ಸ್ ಧರಿಸುವುದು ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದು ಹೇಳುವ ಮೂಲಕ ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ತಾವು ಈ ಹಿಂದೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ನನ್ನ ಹೇಳಿಕೆಗೆ ಹಲವಾರು ಜನರು ಬೆಂಬಲ ನೀಡಿದ್ದಾರೆ. ಹರಿದ ಜೀನ್ಸ್ ಧರಿಸುವುದು ಭಾರತೀಯ ಸಂಸ್ಕೃತಿಯಲ್ಲ ಎಂದಿದ್ದಾರೆ.
ರಾವತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎನ್ ಜಿ ಒ ಒಂದರ ಮುಖ್ಯಸ್ಥೆಯ ಉಡುಗೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಆ ಮಹಿಳೆ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆಕೆಗೆ ಇಬ್ಬರು ಮಕ್ಕಳಿದ್ದಾರೆ, ಹರಿದ ಜೀನ್ಸ್ ಅನ್ನು ಧರಿಸಿ ಸಮಾಜದ ವಿವಿಧ ಸ್ತರಗಳಲ್ಲಿ ಓಡಾಡುತ್ತಾರೆ. ಇಂತಹವರು ಸಮಾಜಕ್ಕೆ ಯಾವ ಮೌಲ್ಯಗಳನ್ನು ಹೇಳಿಕೊಡುತ್ತಾರೆ ಎಂದು ಟೀಕಿಸಿದ್ದರು.
ಮೌಲ್ಯಗಳ ಕೊರೆತ ಇರುವ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆ ವಿಚಿತ್ರವಾದ ಫ್ಯಾಷನ್ ಗೆ ಮಾರು ಹೋಗುತ್ತಿದ್ದಾರೆ. ಮೊಣಕಾಲಿನ ಬಳಿ ಹರಿದಿರುವ ಜೀನ್ಸ್ ಅನ್ನು ಧರಿಸುವ ಮೂಲಕ ನಾವು ದೊಡ್ಡ ಶ್ರೀಮಂತರು ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ. ಇಂತಹ ಉಡುಗೆಗಳನ್ನು ಮಹಿಳೆಯರೂ ಧರಿಸುತ್ತಿದ್ದಾರೆ. ಆದರೆ, ಇದು ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದು ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.