ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಈ ವೇಳೆ ಓರ್ವ ಶಂಕಿತ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.
ಗುಂಡಿನ ದಾಳಿ ನಡೆಯುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಡೊನಾಲ್ಡ್ ಟ್ರಂಪ್ ಅವರನ್ನು ತಕ್ಷಣವೇ ಘಟನಾ ಸ್ಥಳದಿಂದ ಸುರಕ್ಷಿತ ತಾಣಕ್ಕೆ ಕರೆದೊಯ್ದಿದ್ದು, ಈ ಸಂದರ್ಭದಲ್ಲಿ ಟ್ರಂಪ್ ಅವರ ಮುಖದ ಮೇಲೆ ರಕ್ತದ ಕಲೆ ಇರುವುದು ಕಂಡು ಬಂದಿದೆ. ಹೀಗಾಗಿ ಅತ್ಯಂತ ಸಮೀಪದಿಂದ ಈ ದಾಳಿ ನಡೆದಿರಬಹುದು ಎಂದು ಊಹಿಸಲಾಗಿದೆ.
ಶನಿವಾರದಂದು ಪೆನ್ಸೇಲ್ವಿನಿಯಾದಲ್ಲಿ ನಡೆಯುತ್ತಿದ್ದ ರಾಲಿ ವೇಳೆ ಈ ದಾಳಿ ನಡೆದಿದ್ದು, ಆರೋಪಿ ಡೊನಾಲ್ಡ್ ಟ್ರಂಪ್ ಅವರನ್ನು ತನ್ನ ಗುರಿಯಾಗಿಸಿಕೊಂಡಿದ್ದ ಎಂಬುದು ಇದರಿಂದ ಸ್ಪಷ್ಟವಾಗಿದೆ. ಸಣ್ಣ ಮಟ್ಟದಲ್ಲಿ ಗಾಯಗೊಂಡಿರುವ ಟ್ರಂಪ್ ಅವರನ್ನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಘಟನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೊದಲಾದವರು ಖಂಡಿಸಿದ್ದು, ಡೊನಾಲ್ಡ್ ಟ್ರಂಪ್ ಅಪಾಯದಿಂದ ಪಾರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಅಮೆರಿಕ ರಕ್ಷಣಾ ಪಡೆ ಘಟನೆ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಗುಂಡಿನ ದಾಳಿ ನಡೆಯುತ್ತಿದ್ದಂತೆ ಪ್ರತಿ ದಾಳಿ ನಡೆಸಿದ ರಕ್ಷಣಾ ಸಿಬ್ಬಂದಿ ಓರ್ವ ಶಂಕಿತನನ್ನು ಹೊಡೆದುರುಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಸಹ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
VIDEO