ಮಾಜಿ ಕೇಂದ್ರ ಸಚಿವ ಪಿ. ರಂಗರಾಜನ್ ಕುಮಾರಮಂಗಲಂ ಅವರ ಪತ್ನಿ 68 ವರ್ಷದ ಕಿಟ್ಟಿ ಕುಮಾರಮಂಗಲಂ ಅವರನ್ನು ಅವರ ನಿವಾಸದಲ್ಲಿಯೇ ಹತ್ಯೆ ಮಾಡಲಾಗಿದೆ. ದೆಹಲಿಯ ವಸಂತ ವಿಹಾರ್ ಪ್ರದೇಶದಲ್ಲಿನ ಮನೆಯಲ್ಲಿ ಕಿಟ್ಟಿ ಕುಮಾರಮಂಗಲಂ ತಮ್ಮ ಕೆಲಸದವರಿಂದಲೇ ಹತ್ಯೆಯಾಗಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ ಕಿಟ್ಟಿ ಕುಮಾರಮಂಗಲಂ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಿದ್ದು ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಿಟ್ಟಿ ಕುಮಾರಮಂಗಲಂ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ರಾಜು ಲಕ್ಕನ್ ಎಂಬಾತ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಸಹಚರರೊಂದಿಗೆ ಮನೆ ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮಂಜು ಎಂಬಾಕೆಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ.
ಬಳಿಕ ಕಿಟ್ಟಿ ಕುಮಾರಮಂಗಲಂ ಅವರನ್ನು ಹತ್ಯೆಗೈದು ಹಣ ಹಾಗೂ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಪ್ರಮುಖ ಆರೋಪಿ ರಾಜು ಲಕ್ಕನ್ ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನ ಸಹಚರರ ಬಂಧನಕ್ಕೆ ಬಲೆ ಬೀಸಿದ್ದಾರೆ.