ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು ಆರ್‌ಜೆಡಿ ನಾಯಕ ಶರದ್ ಯಾದವ್(75) ಅವರು ರಾತ್ರಿ ನಿಧನರಾಗಿದ್ದಾರೆ.
ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟ್ಟರ್‌ನಲ್ಲಿ “ಪಾಪಾ ನಹೀ ರಹೇ (ಪಾಪಾ ಇನ್ನಿಲ್ಲ)” ಎಂದು ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಮಾಜಿ ಸಚಿವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರದ್ ಯಾದವ್ ಅವರನ್ನು ಪ್ರಜ್ಞಾಹೀನ ಮತ್ತು ಸ್ಪಂದಿಸದ ಸ್ಥಿತಿಯಲ್ಲಿ ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. ಅವರಿಗೆ ಯಾವುದೇ ನಾಡಿಮಿಡಿತ ಅಥವಾ ರೆಕಾರ್ಡ್ ಮಾಡಬಹುದಾದ ರಕ್ತದೊತ್ತಡ ಇರಲಿಲ್ಲ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.
ಆರೋಗ್ಯ ಅಧಿಕಾರಿಗಳ ಉತ್ತಮ ಪ್ರಯತ್ನದ ಹೊರತಾಗಿಯೂ ಯಾದವ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾತ್ರಿ 10:19 ಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ದೇಶದ ಅತ್ಯುನ್ನತ ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಯಾದವ್ ಅವರು ದಶಕಗಳ ಕಾಲ ಜನತಾ ರಾಜಕೀಯದ ಕೇಂದ್ರಬಿಂದುವಾಗಿದ್ದರು.
ಶರದ್ ಯಾದವ್ ಅವರು ಮೂರು ಬಾರಿ ರಾಜ್ಯಸಭೆಯ ಸದಸ್ಯರಾಗಿ, 7 ಬಾರಿ ಲೋಕಸಭೆಯ ಸಂಸದರಾಗಿದ್ದರು.
ಮೂರು ರಾಜ್ಯಗಳ (ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರ) ಸಂಸದರಾದ ಶರದ್ ಯಾದವ್ ಅವರು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಲು 1990 ರಲ್ಲಿ ಅಂದಿನ ಪ್ರಧಾನಿ ವಿಪಿ ಸಿಂಗ್ ಅವರಿಗೆ ಒತ್ತಾಯಿಸಿದ್ದರು. ಅದು ಭಾರತದ ರಾಜಕೀಯದ ದಿಕ್ಕನ್ನೇ ಬದಲಿಸಿತು.
ಮಹಿಳಾ ಮೀಸಲಾತಿ ಮಸೂದೆಯೊಳಗೆ ಜಾತಿ ಆಧಾರಿತ ಕೋಟಾಕ್ಕೆ ಶರದ್ ಯಾದವ್ ಅವರ ಬೇಡಿಕೆಯು ಯುಪಿಎ II ಸರ್ಕಾರ ಕಾನೂನನ್ನು ತಡೆಹಿಡಿಯಲು ಕಾರಣವಾಗಿತ್ತು.