ನವದೆಹಲಿ: ಗುಜರಾತ್ ನ ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವರಾದ ಬುಡಕಟ್ಟು ಸಮುದಾಯದ ನಾಯಕ ಮನಸುಖ್ ಭಾಯ್ ವಾಸವ ರಾಜೀನಾಮೆ ನೀಡಿದ್ದಾರೆ.
ಪಕ್ಷವನ್ನು ತೊರೆದಿರುವ ಮನಸುಖ್ ವಾಸವ ಮುಂದಿನ ಬಜೆಟ್ ಅಧಿವೇಶನದಲ್ಲಿ ಸಂಸದ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಗುಜರಾತ್ ಬಿಜೆಪಿ ಅಧ್ಯಕ್ಷ ಪಾಟೀಲ್ ಅವರಿಗೆ ಪತ್ರ ಬರೆದಿರುವ ಮನಸುಖ್ ವಾಸವ, ಪಕ್ಷ ನಿಷ್ಟೆಯಿಂದ ನಾನು ಕೆಲಸ ಮಾಡಿದ್ದೇನೆ. ಮೌಲ್ಯಧಾರಿತ ಜೀವನ ನಡೆಸಿದ್ದೇನೆ. ಮನುಷ್ಯನೆಂದ ಮೇಲೆ ಕೆಲವು ತಪ್ಪುಗಳು ಸಹಜ. ನನ್ನ ತಪ್ಪುಗಳಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಅವರ ರಾಜೀನಾಮೆ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಭರತ್ ಪಾಂಡ್ಯ, ಪಕ್ಷದ ಅಧ್ಯಕ್ಷರು ಅವರೊಂದಿಗೆ ಮಾತನಾಡಿದ್ದು, ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸುತ್ತಾರೆ. ಮನಸುಖ್ ವಾಸವ ಅವರು ಗುಜರಾತ್ ಹಿರಿಯ ಸಂಸದರಾಗಿದ್ದು, ಅವರೊಂದಿಗೆ ಪಕ್ಷ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ನರ್ಮದಾ ಜಿಲ್ಲೆಯ 121 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಕೇಂದ್ರ ಅರಣ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಇದನ್ನು ಹಿಂಪಡೆಯಬೇಕೆಂಬುದು ವಾಸವ ಅವರ ಬೇಡಿಕೆಯಾಗಿತ್ತು.