ಹೈದರಾಬಾದ್: ಕೇಂದ್ರ ಸರ್ಕಾರದ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ದೊಡ್ಡ ಹೋರಾಟವನ್ನು ಕೈಗೊಂಡಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ. ಕೋಮುಶಕ್ತಿಗಳ ವಿರುದ್ಧ ಹೋರಾಡಿ ದೇಶ ಉಳಿಸಬೇಕಿದೆ ಎಂದು ತೆಲಂಗಾಣ ಸಿಎಂಗೆ ಕರೆ ಮಾಡಿ ದೇವೇಗೌಡರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಂಗಳವಾರ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಎಲ್ಲಾ ಶಕ್ತಿಗಳು ಒಟ್ಟಾಗಿ ಒಗ್ಗೂಡಿ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ದೂರವಿಡಲು ಸಿಎಂ ಕೆಸಿಆರ್ ಕರೆಗೆ ಬೆಂಬಲ ನೀಡಿದ್ದಾರೆ.
ದೇವೇಗೌಡರ ಬೆಂಬಲಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಬಿಜೆಪಿಯನ್ನು ಈ ದೇಶದಿಂದ ಕಿತ್ತೊಗೆಯಲು ಎಲ್ಲ ಶಕ್ತಿಗಳು ಒಂದಾಗಬೇಕು. ಇಲ್ಲದಿದ್ದರೆ ಸಮಾಜ ಹಾಳಾಗುತ್ತದೆ ಎಂದು ಕೆಸಿಆರ್ ಶನಿವಾರ ಹೇಳಿದ್ದರು. ದೇಶದ ಯುವಜನತೆ ಹಾಗೂ ಜನತೆ ಮುಂದಾಳತ್ವ ವಹಿಸಬೇಕು ಎಂದು ಕರೆ ನೀಡಿದ್ದರು.
ಕರ್ನಾಟಕದಲ್ಲಿ ಹಿಜಾಬ್ ವಿವಾದಿಂದ ಹಿಡಿದು ಕೇಂದ್ರ ಸರ್ಕಾರದ ಉದ್ದೇಶಿತ ವಿದ್ಯುತ್ ಸುಧಾರಣೆಗಳವರೆಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿ, ಕೇಸರಿ ಪಕ್ಷವು ಮತ ಸೆಳೆಯಲು ಚುನಾವಣೆಗೆ ಮುನ್ನ ಧಾರ್ಮಿಕ ನೆಲೆಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ. ಇದು ದೇಶದ ‘ಪರಿಸರ’ವನ್ನು ಕದಡುತ್ತಿದೆ ಎಂದು ಅವರು ಟೀಕಿಸಿದ್ದರು.
ಬಿಜೆಪಿ ವಿರೋಧಿ ರಂಗವನ್ನು ನಿರ್ಮಿಸುವ ಪ್ರಶ್ನೆಗೆ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅದೇ ಸಮಯದಲ್ಲಿ ಅವರು ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಸಿಎಂ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದಾರೆ.