ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದ ಮೇಲೂ ಪಾಕಿಸ್ತಾನದ ಕೆಲವೊಂದು ಕ್ರಿಕೆಟಿಗರಿಗೆ ಮೂಲಭೂತವಾದ ಹೋದಂತೆ ಕಾಣುವುದಿಲ್ಲ. ಬಹಳಷ್ಟು ಬಾರಿ ಈ ದೇಶದ ಕ್ರಿಕೆಟಿಗರು ಸಂಕುಚಿತ ಮನಸ್ಥಿತಿಯೊಂದಿಗೆ ಜಾಗತಿಕ ಮಾಧ್ಯಮಗಳ ಮುಂದೆಯೇ ಮಾತನಾಡಿರುವ ಅನೇಕ ನಿದರ್ಶನಗಳನ್ನು ಕಂಡಿದ್ದೇವೆ.
ಇದೀಗ ಈ ಪಟ್ಟಿಗೆ ಹೊಸದಾಗಿ ಸೇರಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜ಼ಾಕ್ ತಮ್ಮದೇ ದೇಶದ ಮಹಿಳಾ ಕ್ರಿಕೆಟರ್ ಒಬ್ಬರ ವಿರುದ್ಧ ಮಾಡಿದ ಲಿಂಗ ತಾರತಮ್ಯದ ಕಾಮೆಂಟ್ ಒಂದು ವಿವಾದ ಸೃಷ್ಟಿಸಿದೆ.
ಪಾಕಿಸ್ತಾನ ಸುದ್ದಿ ವಾಹಿನಿ ನಿಯೋ ನ್ಯೂಸ್ ಚಾನೆಲ್‌ನ ಶೋ ಒಂದರಲ್ಲಿ ರಜ಼ಾಕ್ ಹಾಗೂ ಮಹಿಳಾ ಕ್ರಿಕೆಟರ್ ನಿದಾ ದಾರ್ ಭಾಗಿಯಾಗಿದ್ದರು. ಈ ವೇಳೆ ದಾರ್ ಅವರನ್ನು ಮದುವೆ ಯಾವಾಗ ಆಗುತ್ತೀರಿ ಎಂದು ಹೋಸ್ಟ್‌ಗಳು ಕೇಳಿದ್ದರು. ಇದಕ್ಕೆ ಆಟದ ಅಂಗಳದಲ್ಲಿ ಸಾಧನೆ ಮಾಡಿದ ಬಳಿಕ ಮದುವೆ ಬಗ್ಗೆ ಆಲೋಚನೆ ಮಾಡುವುದಾಗಿ ಹೇಳಿದ್ದಾರೆ.
BIG NEWS: 2ನೇ ಅಭ್ಯಾಸ ಪಂದ್ಯಕ್ಕೆ ಪಂತ್ ಲಭ್ಯ..? ಟೀಂ ಇಂಡಿಯಾ ಉಳಿದ ಆಟಗಾರರ ವರದಿ ನೆಗೆಟಿವ್
ಆ ವೇಳೆ ನಿದಾ ಬಗ್ಗೆ ವೈಯಕ್ತಿಕ ಕಮೆಂಟ್ ಮಾಡಿದ ರಜ಼ಾಕ್, “ನಿದಾ ದಾರ್‌ರಂಥ ಮಹಿಳಾ ಕ್ರಿಕೆಟರ್‌ಗಳು ಪುರುಷ ಕ್ರಿಕೆಟರ್‌ಗಳ ಮಟ್ಟದಲ್ಲೇ ಇದ್ದು, ತಾವೂ ಸಹ ಏನು ಬೇಕಾದರೂ ಮಾಡಬಹುದು ಎಂದು ಸಾಬೀತು ಮಾಡಲು ಬಯಸುತ್ತಾರೆ” ಎಂದಿದ್ದಾರೆ.
ಇಲ್ಲಿಂದ ಮುಂದಕ್ಕೆ ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡ ರಜ಼ಾಕ್, “ಅವರ ಕ್ಷೇತ್ರವೇ ಹಾಗಿದೆ. ಅವರು ಕ್ರಿಕೆಟರುಗಳಾದ ಮೇಲೆ ತಮ್ಮ ಪುರುಷ ಸಹೋದ್ಯೋಗಿಗಳಿಗೆ ಸಮನಾಗಲು ಬಯಸುತ್ತಾರೆ, ಅವರು ಅದನ್ನು ಮಾಡಲೂಬಲ್ಲರು. ತಮ್ಮ ಕ್ಷೇತ್ರದಲ್ಲಿ ಮುಂದುವರೆಯುತ್ತಲೇ ಮದುವೆಯಾಗಬೇಕೆಂಬ ಆಲೋಚನೆ ಅವರಿಗೆ ಹೊರಟುಹೋಗುತ್ತದೆ. ನೀವು ಆಕೆಯ ಕೈಗಳನ್ನು ಶೇಕ್ ಮಾಡಿದರೆ ಆಕೆ ಹುಡುಗಿ ಎನಿಸುವುದಿಲ್ಲ” ಎಂದು ರಜ಼ಾಕ್ ಶೋನಲ್ಲಿ ಮಾತನಾಡಿದ್ದಾರೆ. ರಜ಼ಾಕ್ ಮಾತಿಗೆ ಹಲವಾರು ವರ್ಗಗಳಿಂದ ಭಾರೀ ಟೀಕೆಗಳು ವ್ಯಕ್ತವಾಗಿವೆ.