ಮಂಡ್ಯ: ಕೃಷಿ ಮತ್ತು ಇತರ ಸಾಲ ವಿತರಣೆಯಲ್ಲಿ 12.63 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಮಾಜಿ ಅಧ್ಯಕ್ಷ ಅಸಾದುಲ್ಲಾ ಖಾನ್, ಸಿಂಡಿಕೇಟ್ ಬ್ಯಾಂಕ್ ಮಂಡ್ಯ ಶಾಖೆಯ ಹಿದಿನ ವ್ಯವಸ್ಥಾಪಕ ಹೆಚ್.ಎಂ. ಸ್ವಾಮಿ, ಕೊಳ್ಳೇಗಾಲ ಶಾಖೆಯ ಹಿಂದಿನ ವ್ಯವಸ್ಥಾಪಕ ವಿಠಲದಾಸ್ ಅವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ 52 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿ ಅಸಾದುಲ್ಲಾ ಖಾನ್ ಅವರಿಗೆ ಸಾಲ ವಿತರಣೆ ಮಾಡಿದ ಸಂಬಂಧ 2009ರಲ್ಲಿ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಜಾಗೃತ ಅಧಿಕಾರಿ ಸಿಬಿಐಗೆ ದೂರು ನೀಡಿದ್ದರು. ಸಿಂಡಿಕೇಟ್ ಬ್ಯಾಂಕ್ ನ ಜೈಕಿಸನ್ ಸಾಲ ಯೋಜನೆ ಮತ್ತು ಇತರೆ ಸಾಲ ಸೌಲಭ್ಯಗಳ ಅಡಿ ಸಾಲ ಮಂಜೂರಾತಿ ಮತ್ತು ವಿತರಣೆಯಲ್ಲಿ ಇಬ್ಬರು ವ್ಯವಸ್ಥಾಪಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಸಾದುಲ್ಲಾ ಖಾನ್ ಅವರಿಗೆ ಸಾಲ ನೀಡಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.
ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಹೆಚ್.ಎಂ. ಸ್ವಾಮಿಯವರಿಗೆ ಮೂರು ವರ್ಷ ಜೈಲು ಶಿಕ್ಷೆ 1.5 ಲಕ್ಷ ರೂಪಾಯಿ ದಂಡ, ವಿಠಲದಾಸ್ ಗೆ ಒಂದು ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ, ಅಸಾದುಲ್ಲಾ ಖಾನ್ ಗೆ 3 ವರ್ಷ ಜೈಲು ಶಿಕ್ಷೆ, 50 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ.