ಬೆಂಗಳೂರು: ಬಿಜೆಪಿ ಆಪರೇಷನ್ ಕಮಲಕ್ಕೆ ಟಕ್ಕರ್ ಕೊಡಲು ಮುಂದಾಗಿರುವ ಕಾಂಗ್ರೆಸ್, ಮಾಜಿ ಶಾಸಕರು, ಸಚಿವರನ್ನು ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದು, ಇಂದು ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಹಾಗೂ ಉದ್ಯಮಿ ಶ್ರೀನಿವಾಸ್ ಭಟ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಅವರು ಪಕ್ಷದ ಧ್ವಜ ನೀಡುವ ಮೂಲಕ ವಿ.ಎಸ್. ಪಾಟೀಲ್ ಹಾಗೂ ಶ್ರೀನಿವಾಸ್ ಭಟ್ ಹಾಗೂ ಹಲವು ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂಧರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ವಿ.ಎಸ್. ಪಾಟೀಲ್ ಅವರು ನಮ್ಮ ಜತೆ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಇವರಿಗೆ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ನೀಡಿ, ಗೌರವಿಸಿದ್ದರು. ಆಪರೇಷನ್ ಕಮಲದಲ್ಲಿ ನಮ್ಮ ಶಾಸಕರು ಹೋದ ನಂತರ ಆಯಾ ಕ್ಷೇತ್ರದ ಬಹುತೇಕ ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇತ್ತೀಚೆಗೆ ಹಿರೇಕೆರೂರು ನಾಯಕರು ಸೇರ್ಪಡೆಯಾಗಿದ್ದಾರೆ. ಈಗ ವಿ.ಎಸ್. ಪಾಟೀಲ್ ಹಾಗೂ ಉದ್ಯಮಿ ಶ್ರೀನಿವಾಸ್ ಕಾಂಗ್ರೆಸ್ ಗೆ ಬಂದಿದ್ದಾರೆ. ಇನ್ನು ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಗೆ ಬರಲಿದ್ದಾರೆ. ಅಧಿವೇಶನ ಮುಗಿಯಲಿ ಎಂದು ಕಾಯುತ್ತಿದ್ದಾರೆ ಎಂದು ಹೇಳಿದರು.