ಬೆಂಗಳೂರು: ಹವಾಲಾ ರೀತಿ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಯತ್ನಿಸಿದ ಆರೋಪದ ಮೇರೆಗೆ ಬೆಂಗಳೂರಿನ ಗಾಂಧಿನಗರದ ಪಕ್ಷೇತರ ಅಭ್ಯರ್ಥಿ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಹಾಗೂ ಅವರ ಮೂವರು ಬೆಂಬಲಿಗರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕೃಷ್ಣಯ್ಯ ಶೆಟ್ಟಿ ಅವರ ಬೆಂಬಲಿಗರಾದ ಚಂದ್ರಶೇಖರ, ವೆಂಕಟೇಶ, ವಸಂತಕುಮಾರ್ ಅವರಿಂದ 20 ರೂಪಾಯಿ ಮುಖಬೆಲೆಯ ಆರು ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಬ್ಬನ್ ಪೇಟೆ ವ್ಯಾಪ್ತಿಯಲ್ಲಿ ಮತದಾನಕ್ಕೆ ಎರಡು ದಿನಗಳ ಮೊದಲು ಹಣ ಹಂಚಿಕೆಗೆ ಯತ್ನಿಸಿದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದರು.
ಕೃಷ್ಣಯ್ಯ ಶೆಟ್ಟಿ ಪರವಾಗಿ ಪ್ರಚಾರ ನಡೆಸುತ್ತಿದ್ದ ಆರೋಪಿಗಳು ಮೇ 8ರಂದು ಮಧ್ಯಾಹ್ನ 1:30ರ ವೇಳೆ ಮತದಾರರಿಗೆ ಇಪ್ಪತ್ತು ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡಿದ್ದರು. ನಾವು ಹೇಳಿದ ಸ್ಥಳಕ್ಕೆ ಸೂಚಿಸಿದ ವ್ಯಕ್ತಿಗೆ ಈ 20 ರೂ. ನೋಟು ತೋರಿಸಿ ಅವರು 2000 ರೂ. ಜೊತೆಗೆ ಗಿಫ್ಟ್ ಕೊಡುತ್ತಾರೆ ಎಂದು ಪ್ರಚಾರ ಮಾಡುತ್ತಿದ್ದರು.
ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಗಾಂಧಿನಗರ ಸಂಚಾರ ಚುನಾವಣಾ ವೀಕ್ಷಕಣದಳ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಹಣ ಹಂಚಿಕೆಯಲ್ಲಿ ನಿರತರಾಗಿದ್ದ ಚಂದ್ರಶೇಖರ, ವೆಂಕಟೇಶ ವಸಂತ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಪರವಾಗಿ ಹಣ ಹಂಚಿಕೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅವರ ಹೇಳಿಕೆ ಆಧರಿಸಿ ಚುನಾವಣಾ ಅಧಿಕಾರಿ ರವಿಕುಮಾರ್ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲಾಗಿದೆ.