
ರಾಯಚೂರು: ಡಿಸೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್, ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವುದು ಪಕ್ಷ ಬಲಪಡಿಸಲು ಹೊರತು ಯಾರ ವಿರುದ್ಧವೂ ಅಲ್ಲ ಎಂದು ಹೇಳಿದ್ದಾರೆ.
ಒಬ್ಬರ ನಾಯಕತ್ವದಿಂದ ಇಂದು ಈ ಸ್ಥಿತಿಗೆ ಬಂದಿದ್ದೇವೆ. ಸಾಮೂಹಿಕ ನಾಯಕತ್ವದ ಮೇಲೆ ವಿಶ್ವಾಸವಿದೆ. ವಿಜಯೇಂದ್ರ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ. ಎಂದಿಗೂ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನೆಂದು ಒಪ್ಪಿಕೊಳ್ಳುವುದಿಲ್ಲ. ಡಿಸೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ನಿರ್ಣಯವನ್ನು ಹೈಕಮಾಂಡ್ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಬಾರದು. ನನಗೆ ಸಿಎಂ ಸ್ಥಾನ, ದೊಡ್ಡ ಸ್ಥಾನಮಾನಗಳಾಗಲಿ ಬೇಕಾಗಿಲ್ಲ. ಪಕ್ಷ ಸಂಘಟನೆ ಮುಖ್ಯವಾಗಿದೆ. ಅಸಮಾಧಾನಗೊಂಡ ಕಾರ್ಯಕರ್ತರನ್ನು ಮತ್ತೆ ಸೇರಿಸಿಕೊಂಡು ಪಕ್ಷ ಬಲಪಡಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.