ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.
1983ರಿಂದ 3 ಅವಧಿಗೆ ಕಾರವಾರ -ಜೊಯಿಡಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಚುನಾಯಿತರಾಗಿದ್ದ ಅವರು 1993ರಲ್ಲಿ ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
1996ರಲ್ಲಿ ಕಾಂಗ್ರೆಸ್ ಪಕ್ಷ ತೊರೆದ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಜೆಡಿಎಸ್ ಸೇರಿ ಸ್ಪರ್ಧಿಸಿದ್ದರು. ಸೋತ ನಂತರ ರಾಜಕೀಯದಿಂದ ದೂರ ಉಳಿದಿದ್ದರು.
ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಅಧ್ಯಕ್ಷರಾಗಿ, ಕಾರವಾರ -ಜೊಯಿಡಾ ತಾಲೂಕಿನಲ್ಲಿ ಶಾಲಾ, ಕಾಲೇಜುಗಳನ್ನು ಸ್ಥಾಪಿಸಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರು. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಂತರಾಷ್ಟ್ರೀಯ ಯುವ ಸಮ್ಮೇಳನವನ್ನು ಸಿದ್ದರ ಗ್ರಾಮದಲ್ಲಿ ಆಯೋಜಿಸಿ ದೇಶ, ವಿದೇಶಗಳ ಯುವಕರು ಉತ್ತರ ಕನ್ನಡ ಜಿಲ್ಲೆಯ ಗ್ರಾಮಕ್ಕೆ ಬರಲು ಕಾರಣರಾಗಿದ್ದರು.
ಪ್ರಭಾಕರ ರಾಣಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಾಜಿ ಸಚಿವರು, ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಆತ್ಮೀಯರಾಗಿದ್ದ ಪ್ರಭಾಕರ ರಾಣೆ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.
ಕಾರವಾರ ಹಾಗೂ ಜೊಯಿಡಾ ತಾಲೂಕಿನಲ್ಲಿ ಸಾವಿರಾರು ಬಡ ಮಕ್ಕಳ ಶಿಕ್ಷಣಕ್ಕೆ ರಾಣೆ ಅವರು ಬೆಳಕಾಗಿದ್ದರು. ಇವರ ನಿಧನದಿಂದ ಸಮಾಜಕ್ಕೆ ಶಿಕ್ಷಣ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ರಾಣೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.