
ದಾವಣಗೆರೆ: ದಾವಣಗೆರೆಯ ಮದರ್ ಥೆರೆಸಾ, ಕರ್ನಾಟಕದ ಇಂದಿರಾಗಾಂಧಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ(90) ಶನಿವಾರ ನಿಧನರಾಗಿದ್ದಾರೆ.
ದಾವಣಗೆರೆ ನಗರದ ಪಿಜೆ ಬಡಾವಣೆಯ ನಿವಾಸದಲ್ಲಿ ವಯೋ ಸಹಜ ಕಾಯಿಲೆಯಿಂದ ನಾಗಮ್ಮ ಕೇಶವಮೂರ್ತಿ ನಿಧನರಾಗಿದ್ದು, ಭಾನುವಾರ ಮಧ್ಯಾಹ್ನ ಮೂರು ಗಂಟೆಯವರೆಗೆ ಸಾರ್ವಜನಿಕರ ಅಂತಿಮದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಪಿಬಿ ರಸ್ತೆಯ ವೈಕುಂಠ ಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ದಾವಣಗೆರೆ, ಮಾಯಕೊಂಡ ಕ್ಷೇತ್ರದಿಂದ 3 ಬಾರಿ ಶಾಸಕರಾಗಿದ್ದ ನಾಗಮ್ಮ ಕೇಶವಮೂರ್ತಿ ಅವರು ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಬೃಹತ್ ಕೈಗಾರಿಕೆ, ವಿಧಾನಸಭೆ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಎಂ.ಎನ್. ರಾಮನ್ ಮತ್ತು ಸಾಕಮ್ಮ ದಂಪತಿಯ ಪುತ್ರಿ ನಾಗಮ್ಮ 1951 ರಲ್ಲಿ ದಾವಣಗೆರೆಯ ಉದ್ಯಮಿ ಚನ್ನಗಿರಿ ರಂಗಪ್ಪನವರ ದ್ವಿತೀಯ ಪುತ್ರ ಸಿ. ಕೇಶವಮೂರ್ತಿ ಅವರನ್ನು ಮದುವೆಯಾಗಿ ದಾವಣಗೆರೆಗೆ ಬಂದರು. ಅತ್ತೆಯವರ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ದಾವಣಗೆರೆಯಲ್ಲಿ 1955ರಲ್ಲಿ ವನಿತಾ ಸಮಾಜ ಆರಂಭಿಸಿ ಅದರ ವ್ಯಾಪ್ತಿಯಲ್ಲಿ 52 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದರು.
ಅವರಿಗೆ ಪುತ್ರ ಡಾ. ಜಯಂತ್, ಸೊಸೆ, ಮೊಮ್ಮಗಳು ಇದ್ದಾರೆ. ಶಿಕ್ಷಣ ಸಚಿವರಾಗಿದ್ದಾಗ ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯ ಮಾಡಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು ಆರಂಭಿಸಿದ್ದರು. ಶಾಲಾ ಹಂತದಲ್ಲಿ ಹೆಣ್ಣು ಮಕ್ಕಳಿಗೆ ಶೇಕಡ 50ರಷ್ಟು ಮೀಸಲಾತಿ ಜಾರಿ ಮಾಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳ ಜವಾಬ್ದಾರಿ ನಿರ್ವಹಿಸಿದ್ದರು.