ಬಾಗಲಕೋಟೆ: ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಿರುವ ಸರ್ಕಾರದ ಕ್ರಮಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಕಿಡಿ ಕಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇನ್ನೇನು ಜಿನ್ನಾ, ಔರಂಗಜೇಬ್ ಹೆಸರನ್ನು ಸೇರಿಸಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪ, ದೇಶದ ಸಂಸ್ಕೃತಿ ವಿಚಾರದಲ್ಲಿ ಭಾಷಣದ ಬಗ್ಗೆ ಸೇರಿಸಲಾಗಿದೆ. ಪಠ್ಯದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹೆಸರು ಅಥವಾ ಶಿವಲಿಂಗ ಒಡೆದ ಔರಂಗಜೇಬ್ ಹೆಸರನ್ನು ಸೇರಿಸಬೇಕಿತ್ತಾ? ಮಕ್ಕಳು ಅಲೆಕ್ಸಾಂಡರ್ ದಿ ಗ್ರೇಟ್ ಅಂತಾ ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿ ಸಂಸ್ಕೃತಿ ಒಡೆದರೋ ಅಂಥವರ ವೈಭವೀಕರಣ ನಮ್ಮ ಪಠ್ಯ ಪುಸ್ತಕದಲ್ಲಿ ಇತ್ತು ಈ ಬಗ್ಗೆ ಅರಿತು ಮಾತನಾಡಲಿ ಎಂದರು.
ದೇಶ ಒಡೆಯುವವರ ವಿಚಾರ ಬಿಟ್ಟು ದೇಶವನ್ನು ಒಗ್ಗೂಡಿಸಿದವರ ವಿಚಾರಗಳು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ. ಭಗತ್ ಸಿಂಗ್, ನಾರಾಯಣ ಗುರು ವಿಚಾರ ಪಠ್ಯದಿಂದ ಕೈಬಿಟ್ಟಿಲ್ಲ. ಹೆಡ್ಗೆವಾರ್ ಭಾಷಣ ಸೇರಿಸದಿದ್ದರೆ ದೇಶ ತುಂಡಾಗಿ ಹೋಗುತ್ತಿತ್ತು ಎಂದು ಹೇಳಿದ್ದಾರೆ.