ಶಿವಮೊಗ್ಗ: ಮಾಜಿ ಸಚಿವ, ಮಾಜಿ ಸ್ಪೀಕರ್, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಶಿವಮೊಗ್ಗದ ಎರಡು ವಿವಿಗಳು ಒಂದೇ ದಿನ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿವೆ.
ಕುವೆಂಪು ವಿಶ್ವವಿದ್ಯಾಲಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಕಾಗೋಡು ತಿಮ್ಮಪ್ಪ ಅವರನ್ನು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಲಾಗಿದೆ. ಈ ಪ್ರಕ್ರಿಯೆ ಗೌಪ್ಯವಾಗಿ ನಡೆಯುವುದರಿಂದ ಎರಡೂ ವಿವಿಗಳಿಗೆ ಮತ್ತೊಂದು ವಿವಿಯಲ್ಲಿ ಕಾಗೋಡು ತಿಮ್ಮಪ್ಪ ಅವರನ್ನು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿರುವ ಸಂಗತಿ ಗೊತ್ತಾಗಿಲ್ಲ. ಸಮಾರಂಭ ನಿಗದಿಯಾದ ನಂತರ ಇದು ಗೊತ್ತಾಗಿದೆ.
ಎರಡು ವಿವಿಗಳು ರಾಜ್ಯಪಾಲರ ಶಿವಮೊಗ್ಗ ಪ್ರವಾಸ ದಿನಾಂಕ ಅನುಗುಣವಾಗಿ ಜನವರಿ 22ರಂದು ಘಟಿಕೋತ್ಸವ ಹಮ್ಮಿಕೊಂಡಿವೆ. ಜನವರಿ 22ರಂದು ಬೆಳಗ್ಗೆ 10.30 ಕ್ಕೆ ಕುವೆಂಪು ವಿವಿ ಘಟಿಕೋತ್ಸವ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಕೆಳದಿ ಶಿವಪ್ಪ ನಾಯಕ ವಿವಿ ಘಟಿಕೋತ್ಸವ ನಡೆಯಲಿದ್ದು, ಕಾಗೋಡು ತಿಮ್ಮಪ್ಪ ಅವರು ಬೆಳಗ್ಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್, ಮಧ್ಯಾಹ್ನ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ. ಎರಡೂ ವಿವಿಗಳಿಂದ ಕಾಗೋಡು ತಿಮ್ಮಪ್ಪನವರ ನಿವಾಸಕ್ಕೆ ತೆರಳಿ ಗೌರವ ಡಾಕ್ಟರೇಟ್ ಸ್ವೀಕರಿಸಲು ಆಹ್ವಾನ ನೀಡಲಾಗಿದೆ.