
ಬೆಂಗಳೂರು: ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ(91) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಾಕ್ರಬೈಲು ಗ್ರಾಮದಲ್ಲಿ 1934 ರಲ್ಲಿ ಜನಿಸಿದ್ದ ಸುಬ್ಬಯ್ಯ ಶೆಟ್ಟಿ ಸುರತ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ 1972, 1978ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ದೇವರಾಜ ಅರಸು ಸರ್ಕಾರದಲ್ಲಿ ಭೂ ಸುಧಾರಣೆ ಸಚಿವರಾಗಿದ್ದರು.
ಭೂ ಸುಧಾರಣೆ ಕಾಯ್ದೆ ಜಾರಿಗೆ ತರಲು ಸುಬ್ಬಯ್ಯ ಶೆಟ್ಟಿ ಶ್ರಮಿಸಿದ್ದರು. ರೈತರಿಗೆ ಕೃಷಿ ಭೂಮಿಯ ಮಾಲೀಕತ್ವ ನೀಡುವ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಲು ಆರಂಭದಲ್ಲಿ ಸ್ವಂತ ಭೂಮಿಯನ್ನು ಬಿಟ್ಟುಕೊಟ್ಟ ಭೂ ಮಾಲೀಕರಲ್ಲಿ ಸುಬ್ಬಯ್ಯ ಶೆಟ್ಟಿ ಒಬ್ಬರಾಗಿದ್ದಾರೆ. ನಂತರ ಅವರು ಮಾಹಿತಿ, ಇಂಧನ, ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜನತಾ ಪಕ್ಷ ಸೇರಿದ್ದ ನಂತರ ಅವರು ರಾಜಕೀಯದಿಂದ ನಿವೃತ್ತರಾಗಿದ್ದರು.
ಸಿಎಂ ಸಂತಾಪ:
ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿ ನಿಧನಕ್ಕೆ ಸಿಎಂ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಮಾಜಿ ಸಚಿವರಾದ ಬಿ.ಸುಬ್ಬಯ್ಯ ಶೆಟ್ಟಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಬದ್ಧತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಗಳನ್ನು ರಾಜಕೀಯ ಜೀವನದುದ್ದಕ್ಕೂ ವ್ರತದಂತೆ ಪಾಲಿಸಿಕೊಂಡು ಬಂದಿದ್ದ ಸುಬ್ಬಯ್ಯ ಶೆಟ್ಟಿಯವರು ಅಪರೂಪದ ಮುತ್ಸದ್ದಿ ರಾಜಕಾರಣಿ ಎಂದು ಸಿಎಂ ಹೇಳಿದ್ದಾರೆ.
ದೇವರಾಜ ಅರಸು ಅವರ ಸಂಪುಟದಲ್ಲಿ ಭೂ ಸುಧಾರಣಾ ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟಿಯವರು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ ಕಾಯ್ದೆ ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಲು ಕಾರಣಿಕರ್ತರು. ಸುಬ್ಬಯ್ಯ ಶೆಟ್ಟಿಯವರನ್ನು ಕಳೆದುಕೊಂಡ ಪತ್ನಿ, ಮಕ್ಕಳು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.