ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಉಡುಪಿ ಮೂಲದ ಜಗದೀಶ್ ಎಂಬಾತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಇದರೊಂದಿಗೆ ನಿಗಮದ ಮಾಜಿ ಎಂಡಿ ಪದ್ಮನಾಭ ಬಳಿ 3.5 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ. ಅಕ್ರಮದ ಪ್ರಮುಖ ಆರೋಪಿ ವಾಲ್ಮೀಕಿ ನಿಗಮದ ಮಾಜಿ ಎಂಡಿ ಪದ್ಮನಾಭ ಹಣ ವರ್ಗಾವಣೆಯ ಮೂಲಕ ಕಮಿಷನ್ ರೂಪದಲ್ಲಿ 3.5 ಕೋಟಿ ರೂಪಾಯಿ ನಗದು ಪಡೆದುಕೊಂಡಿದ್ದರು. ಈ ಹಣವನ್ನು ಪತ್ತೆ ಮಾಡಿ ಎಸ್ಐಟಿ ಜಪ್ತಿ ಮಾಡಿದೆ.
ಹಣ ಅಕ್ರಮ ವರ್ಗಾವಣೆಯಲ್ಲಿ ಚಂದ್ರಮೋಹನ್ ಜೊತೆಗೆ ಕೈಜೋಡಿಸಿದ್ದ ಜಗದೀಶ್ ಪ್ರಕರಣ ದಾಖಲಾದ ನಂತರ ತಲೆಮರಿಸಿಕೊಂಡಿದ್ದ. ಶೋಧ ಕೈಗೊಂಡಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಗರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಹೈದರಾಬಾದ್ ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ಖಾತೆಯಲ್ಲಿದ್ದ 45 ಕೋಟಿ ರೂ.ಗಳನ್ನು ಜೂ. 6ರಂದು ಜಪ್ತಿ ಮಾಡಿದ್ದರು. ಈಗಾಗಲೇ ಬಂದಿತನಾಗಿರುವ ಸತ್ಯನಾರಾಯಣ ಇಟಕಾರಿ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ಅಧ್ಯಕ್ಷನಾಗಿದ್ದ. ಇದೇ ಬ್ಯಾಂಕಿನ 18 ನಕಲಿ ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ಅಕ್ರಮವಾಗಿ 94.73 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು.