ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ತಮ್ಮ ಪುತ್ರ ರುಚಿರ್ ಮೋದಿ ಅವರನ್ನು ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ.
ಲಲಿತ್ ಮೋದಿಯವರು ಕರೋನ ವೈರಸ್‌ನಿಂದ ಬಳಲುತ್ತಿದ್ದು ಲಂಡನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಟುಂಬದ ವಿಷಯಗಳಲ್ಲಿ ರುಚಿರ್ ಮೋದಿಯನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವುದಾಗಿ ಹೇಳಿದ ಅವರು, ಈ ನಿಟ್ಟಿನಲ್ಲಿ ಪುತ್ರಿ ಆಲಿಯಾ ಜತೆ ಚರ್ಚಿಸಿ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿರುವ ಲಲಿತ್, ‘ನಾನು ನನ್ನ ಮಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ ಮತ್ತು ಎಲ್‌ಕೆಎಂ (ಲಲಿತ್ ಕುಮಾರ್ ಮೋದಿ) ಕುಟುಂಬದ ವ್ಯವಹಾರಗಳು ಮತ್ತು ಟ್ರಸ್ಟ್‌ನಲ್ಲಿ ನನ್ನ ಲಾಭದಾಯಕ ಹಿತಾಸಕ್ತಿಗಳ ನಿಯಂತ್ರಣವನ್ನು ನಾನು ಬಿಟ್ಟುಕೊಡಬೇಕೆಂದು ನಾವಿಬ್ಬರೂ ಅಭಿಪ್ರಾಯಪಟ್ಟಿದ್ದೇವೆ. ಅದನ್ನು ಪುತ್ರ ರುಚಿರ್ ಮೋದಿಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದ್ದೇವೆ’ ಎಂದಿದ್ದಾರೆ.
ಅಂದಹಾಗೆ, ಆಸ್ತಿಗೆ ಸಂಬಂಧಿಸಿದಂತೆ ಲಲಿತ್ ಮೋದಿ ತಾಯಿ ಮತ್ತು ಸಹೋದರಿಯೊಂದಿಗೆ ವಿವಾದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನೀಗ ಸ್ಪಷ್ಟಪಡಿಸಿದ್ದಾರೆ.