ನವದೆಹಲಿ: ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ(ನಿವೃತ್ತ) ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಭಾರತೀಯ ವಾಯುಪಡೆಯಲ್ಲಿ(ಐಎಎಫ್) ಭದೌರಿಯಾ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು, ರಕ್ಷಣಾ ಪಡೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ ನಂತರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭದೌರಿಯಾ ಅವರೊಂದಿಗೆ ವೈಎಸ್‌ಆರ್‌ಸಿಪಿ ನಾಯಕ ಮತ್ತು ತಿರುಪತಿಯ ಮಾಜಿ ಸಂಸದ ವರಪ್ರಸಾದ್ ರಾವ್ ಕೂಡ ಬಿಜೆಪಿ ಸೇರಿದರು.
ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಭದೌರಿಯಾ ಮಾತನಾಡಿ, ಮತ್ತೊಮ್ಮೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ನನಗೆ ಈ ಅವಕಾಶವನ್ನು ನೀಡಿದ ಪಕ್ಷದ ನಾಯಕತ್ವಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನಾನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ IAF ಸೇವೆ ಸಲ್ಲಿಸಿದ್ದೇನೆ. ಬಿಜೆಪಿ ಸರ್ಕಾರ ನಮ್ಮ ಸಶಸ್ತ್ರ ಪಡೆಗಳನ್ನು ಸಬಲೀಕರಣ, ಆಧುನೀಕರಣ, ಸ್ವಾವಲಂಬಿಯಾಗಿ ಮಾಡಲು ತೆಗೆದುಕೊಂಡ ಕ್ರಮಗಳು ಹೊಸ ಸಾಮರ್ಥ್ಯ ತಂದಿವೆ ಎಂದರು.
ಭದೌರಿಯಾ ಉತ್ತರ ಪ್ರದೇಶದವರು. ಲೋಕಸಭೆ ಚುನಾವಣೆಗೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಹೆಸರಿಸಿಲ್ಲ. ಭದೌರಿಯಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.