ಇಂಗ್ಲೀಷ್ ಭಾಷೆಯಲ್ಲಿರುವ ಬೇಬಿ ಶಾರ್ಕ್ ಮಕ್ಕಳ ಹಾಡನ್ನು ಬಹುಶಃ ನೀವು ಕೇಳಿರಬಹುದು. ಈ ಮಕ್ಕಳ ಹಾಡು 9 ಬಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ಸಾರ್ವಕಾಲಿಕ ಹೆಚ್ಚು ವೀಕ್ಷಿಸಿದ ಯೂಟ್ಯೂಬ್ ವಿಡಿಯೋವಾಗಿದೆ.
ಮಕ್ಕಳು ಈ ಹಾಡನ್ನು ಬಹಳ ಇಷ್ಟಪಟ್ಟು ಕೇಳುತ್ತಾರೆ. ಹಾಗಂತ ವಯಸ್ಕರಿಗೆ ಈ ಹಾಡನ್ನು ಪದೇಪದೇ ಕೇಳಿದ್ರೆ ಹುಚ್ಚು ಹಿಡಿದಂಗಾಗಬಹುದು. ಅಂದಹಾಗೆ, ಈ ಬೇಬಿ ಶಾರ್ಕ್ ಹಾಡಿನಿಂದ ಹೊಸ ವಿವಾದವೊಂದು ಹುಟ್ಟಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ಇತ್ತೀಚೆಗೆ, ಅಮೆರಿಕಾದ ಒಕ್ಲಹೋಮಾದ ಮಾಜಿ ಕೈದಿಗಳ ಗುಂಪೊಂದು ಜೈಲಾಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಯಾಕೆಂದ್ರೆ ಇವರು ಖೈದಿಯಾಗಿ ಜೈಲಿನಲ್ಲಿದ್ದ ವೇಳೆ, ಪದೇಪದೇ ಈ ಹಾಡನ್ನು ಪ್ಲೇ ಮಾಡಿ ಮಾನಸಿಕವಾಗಿ ಹಿಂಸಿಸಿದ್ದಾರೆ ಎಂಬುದು ದೂರು ನೀಡಿದವರ ಆರೋಪವಾಗಿದೆ.
ಮಕ್ಕಳ ಹಾಡುಗಳನ್ನು ಪದೇ ಪದೇ ಕೇಳುವಂತೆ ಮಾಡಿದ ಜೈಲಿನ ಅಧಿಕಾರಿಗಳು ತಮ್ಮನ್ನು ಹಿಂಸಿಸಿದ್ದಾರೆ ಎಂದು ಮೂವರು ಮಾಜಿ ಕೈದಿಗಳು ಆರೋಪಿಸಿದ್ದಾರೆ. ಅಲ್ಲದೆ ಜೈಲಾಧಿಕಾರಿಗಳು ಈ ಹಾಡನ್ನು ಪ್ಲೇ ಮಾಡಿ, ಗಂಟೆಗಳ ಕಾಲ ಕೈಗೆ ಕೋಳ ಹಾಕಿ ನಿಲ್ಲಿಸುತ್ತಿದ್ದರು ಎಂದು ಆರೋಪಿಸಿ ಒಕ್ಲಹೋಮ ಕೌಂಟಿಯ ಜೈಲರ್ ಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ಖೈದಿಗಳಾಗಿದ್ದು, ಈಗ ಬಿಡುಗಡೆಯಾಗಿರುವ ಡೇನಿಯಲ್ ಹೆಡ್ರಿಕ್, ಜೋಸೆಫ್ ಜೋಯ್ ಮಿಚೆಲ್ ಮತ್ತು ಜಾನ್ ಬಾಸ್ಕೊ, ಮಂಗಳವಾರ ಒಕ್ಲಹೋಮ ಸಿಟಿ ಫೆಡರಲ್ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಯನ್ನು ಹೂಡಿದ್ದಾರೆ. ಒಕ್ಲಹೋಮ ಕೌಂಟಿ ಕಮಿಷನರ್‌ಗಳು, ಶೆರಿಫ್ ಟಾಮಿ ಜಾನ್ಸನ್, ಜೈಲು ಟ್ರಸ್ಟ್ ಮತ್ತು ಇಬ್ಬರು ಮಾಜಿ ಜೈಲರ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ನವೆಂಬರ್ ಮತ್ತು ಡಿಸೆಂಬರ್ 2019 ರಿಂದ ಇದೇ ರೀತಿಯ ಕನಿಷ್ಠ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ.