ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಘೋಷಿಸಿದ್ದಾರೆ.
ಪುತ್ರನಿಗೆ ಹಾವೇರಿ ಲೋಕಸಭೆ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳೊಂದಿಗೆ ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಸಭೆ ನಡೆಸಿದ ಈಶ್ವರಪ್ಪ, ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ನಾನು ಸ್ವತಂತ್ರವಾಗಿ ಸ್ಪರ್ಧಿಸಿ ಮೋದಿ, ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ತಪ್ಪಿಸಲು ಸ್ಪರ್ಧೆ ಮಾಡುತ್ತೇನೆ. ಪಕ್ಷದ ನೊಂದ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಪ್ರಾಣ ಹೋದರೂ ನಾನು ನರೇಂದ್ರ ಮೋದಿ ವಿರುದ್ಧ ಹೋಗುವುದಿಲ್ಲ. ಪ್ರಧಾನಿ ಮೋದಿ ಆಗುವ ಮೊದಲು ಎಲ್ಲಾ ದೇಶಗಳು ಪಾಕಿಸ್ತಾನ ಜೊತೆಗಿದ್ದವು. ಆದರೆ, ಮೋದಿ ಪ್ರಧಾನಿ ಆದ ನಂತರ ಎಲ್ಲಾ ದೇಶಗಳು ಭಾರತದ ಜೊತೆಗಿವೆ. ಮುಸ್ಲಿಂ ರಾಷ್ಟ್ರಗಳು ಕೂಡ ಮೋದಿಗೆ ರತ್ನಗಂಬಳಿ ಹಾಕಿ ನಮ್ಮ ದೇಶಕ್ಕೆ ಬನ್ನಿ ಎಂದು ಮೋದಿಗೆ ದುಂಬಾಲು ಬೀಳುತ್ತಿವೆ ಎಂದರು.
ವಂಶ ಪಾರಂಪರ್ಯದ ವಿರುದ್ಧ ಪ್ರಧಾನಿ ಮೋದಿ ಮಾತನಾಡಿದರು. ಹಾಗಾಗಿ ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಿದಾಗ ವಿಧಾನಸಭೆ ಚುನಾವಣೆ ವೇಳೆ ನೀವು ಹಿಂದೆ ಸರಿಯಬೇಕು ಎಂದರು. ಪಕ್ಷದ ಹಿರಿಯರ ಸೂಚನೆಯಂತೆ ನಾನು ಸ್ಪರ್ಧೆಯಿಂದ ಹಿಂದೆ ಸರಿದೆ. ಲೋಕಸಭೆ ಚುನಾವಣೆಯಲ್ಲಿ ಪುತ್ರ ಕಾಂತೇಶ್ ಟಿಕೆಟ್ ಕೊಡುವ ಭರವಸೆ ನೀಡಿದ್ದರು ಎಂದು ಹೇಳಿದರು.