ಬೆಂಗಳೂರು: ವಿಧಾನಸಭೆಯಲ್ಲಿ ವರ್ಗಾವಣೆ ದಂಧೆ ವಿಚಾರ ಮತ್ತೆ ಪ್ರತಿಧ್ವನಿಸಿದೆ. ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಸ್ಪೀಕರ್ ಗೆ ವರ್ಗಾವಣೆ ದಂಧೆ ಲಿಸ್ಟ್ ಕಳುಹಿಸುವುದಾಗಿ ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅದು ಹಿಂದಿನ ಸರ್ಕಾರದ ಲಿಸ್ಟ್ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಯತ್ನಾಳ್, ನಮಗೂ ಆ ಲಿಸ್ಟ್ ಕೊಡಿ. ಬೆಂಗಳೂರಿನಲ್ಲಿ ಸ್ಟಾಕ್ ಎಕ್ಸ್ ಚೇಂಜ್ ರೇಟ್ ಎಷ್ಟಿದೆ ನೋಡಬೇಕು ಎಂದಿದ್ದಾರೆ. ಈ ವೇಳೆ ಸ್ಪೀಕರ್ ಖಾದರ್ ಆಯ್ತು ಕಳುಹಿಸಿ ಕೊಡುತ್ತೇನೆ ಎಂದಿದ್ದಾರೆ.
ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ. ಎಲ್ಲದಕ್ಕೂ ದಾಖಲೆಗಳು ಇವೆ. ಇಲಾಖಾವಾರು ವರ್ಗಾವಣೆಗೆ ಹಣ ನಿಗದಿ ಬಗ್ಗೆ ವರದಿ ಪತ್ರವಿದೆ. ಎಲ್ಲವನ್ನೂ ಇಗಲಾದರೂ ಸರಿಪಡಿಸಿಕೊಳ್ಳಿ ಎಂದಷ್ಟೇ ಹೇಳುತ್ತೇನೆ ಎಂದಿದ್ದಾರೆ.