ಬೆಂಗಳೂರು: ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ ಮಹಿಳೆಯರು ಮರುಳಾಗಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಆರ್.ಜೆ. ಕನ್ವೆನ್ಷನ್ ಸೆಂಟರ್ ನಲ್ಲಿ ಬೆಂಗಳೂರು ಉತ್ತರ ಲೋಕಸಭೆ ಚುನಾವಣೆ ಸಂಬಂಧ ನಡೆದ ಜೆಡಿಎಸ್, ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ ಮಹಿಳೆಯರು ಮರುಳಾಗಬೇಡಿ. ಚುನಾವಣೆ ಬಳಿಕ ಎಲ್ಲಾ ಗ್ಯಾರೆಂಟಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕರ್ತರ ಜೋಷ್ ನೋಡಿದ್ರೆ ನನಗೆ ಖುಷಿಯಾಗುತ್ತಿದೆ. ಕನಿಷ್ಠ 75000 ಮತಗಳ ಅಂತರದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸಿ. ಸೀಟಿಗಾಗಿ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಬ್ರಾಂಡ್ ಬೆಂಗಳೂರು ಅಂದ್ರು, 10 ತಿಂಗಳಲ್ಲಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.