ನವದೆಹಲಿ: ಮಾಜಿ ಅಟಾರ್ನಿ ಜನರಲ್ ಮತ್ತು ಖ್ಯಾತ ಅಂತಾರಾಷ್ಟ್ರೀಯ ನ್ಯಾಯವಾದಿ ಸೋಲಿ ಸೊರಾಬ್ಜಿ ಕೊರೋನಾ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಹಿರಿಯ ವಕೀಲರಾದ ಸೋಲಿ ಸೊರಾಬ್ಜಿ ಕೊರೊನಾ ಸೋಂಕು ತಗುಲಿದ್ದರಿಂದ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗೆ ಅವರ ಕಾರ್ಯವನ್ನು ಪರಿಗಣಿಸಿ 2002 ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ್ ನೀಡಿ ಗೌರವಿಸಲಾಗಿತ್ತು.
1930 ರಲ್ಲಿ ಬಾಂಬೆಯಲ್ಲಿ ಜನಿಸಿದ ಸೊರಬ್ಜಿ 1953 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಅವರು ಮೊದಲು 1989-90ರಿಂದ ಮತ್ತು ನಂತರ 1998-2004ರವರೆಗೆ ಭಾರತದ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಹೆಸರಾಂತ ಮಾನವ ಹಕ್ಕುಗಳ ವಕೀಲ ಸೊರಬ್ಜಿಯನ್ನು 1997 ರಲ್ಲಿ ಯುಎನ್ ನೈಜೀರಿಯಾದ ವಿಶೇಷ ಸದಸ್ಯನಾಗಿ ನೇಮಕ ಮಾಡಿತ್ತು. ಮಾನವ ಹಕ್ಕುಗಳ ಉತ್ತೇಜನ ಮತ್ತು ಸಂರಕ್ಷಣೆ ಕುರಿತ ಯುಎನ್-ಉಪ ಆಯೋಗದ ಸದಸ್ಯರಾಗಿ ನಂತರ ಅಧ್ಯಕ್ಷರಾಗಿ 1998 ರಿಂದ 2004 ರವರೆಗೆ ಕಾರ್ಯನಿರ್ವಹಿಸಿದ್ದಾರೆ.