ಬೆಂಗಳೂರು: ಹೊರಗುತ್ತಿಗೆ ನೌಕರರ ಸೇವೆಗೆ ಸೊಸೈಟಿ ರಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ನ ಕೆ.ಎಸ್. ಬಸವಂತಪ್ಪ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದು, ಕಾರ್ಮಿಕರ ವಿವಿಧೋದ್ದೇಶ ಸೊಸೈಟಿ ರಚನೆಯ ಮೂಲಕ ಹೊರಗುತ್ತಿಗೆ ನೌಕರರ ಸೇವೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಆರ್ಥಿಕ ಇಲಾಖೆಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬೀದರ್ ನಲ್ಲಿ ನಡೆಸಿದ ಈ ಪ್ರಯೋಗ ಯಶಸ್ವಿಯಾಗಿದ್ದು, ಜಿಲ್ಲಾಮಟ್ಟದಲ್ಲಿ ಸೊಸೈಟಿ ರಚಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೊರಗುತ್ತಿಗೆ ಸೇವೆ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊರಗುತ್ತಿಗೆ ಹೇಳಿ ನೇಮಕಗೊಂಡ ಡಿ ಗ್ರೂಪ್ ನೌಕರರಿಗೆ 17,500 ರೂ. ವೇತನ ನೀಡಬೇಕು. ಆದರೆ, ಗುತ್ತಿಗೆ ಸಂಸ್ಥೆಗಳು ಕೇವಲ 10,500 ರೂ. ನೀಡಿ ವಂಚಿಸುತ್ತಿದ್ದು, ಪಿಎಫ್, ಇಎಸ್ಐ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಬಸವಂತಪ್ಪ ದೂರಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರಾದ ಶಿವಲಿಂಗೇಗೌಡ, ಮಹಾಂತೇಶ ಕೌಜಲಗಿ, ಎಸ್.ಎನ್. ನಾರಾಯಣಸ್ವಾಮಿ ದನಿಗೂಡಿಸಿದರು.
ಆಗ ಸಚಿವರು ಕನಿಷ್ಠ ವೇತನ ಪಾವತಿಸದವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ. ಕನಿಷ್ಠ ವೇತನ ಪ್ರಾಧಿಕಾರಿಳಾಗಿರುವ ಕಾರ್ಮಿಕ ಆಯುಕ್ತರು ಮತ್ತು ಸಹಾಯಕ ಕಾರ್ಮಿಕ ಆಯುಕ್ತರ ಮುಂದೆ ನೌಕರರು ಕ್ಲೈಂ ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.