ಇಂದಿನ ಬಿಡುವಿಲ್ಲದ ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಅನಿಯಮಿತ ಜೀವನಶೈಲಿಯಿಂದಾಗಿ ಜನರು ಸಾಮಾನ್ಯವಾಗಿ ಸಣ್ಣ ಸಣ್ಣ ವಿಷಯಗಳನ್ನು ಮರೆತುಬಿಡುತ್ತಾರೆ. ಆದರೆ ಈ ರೀತಿಯ ಮರೆವು ಇದ್ದರೆ ಅದನ್ನು ನಿರ್ಲಕ್ಷಿಸಬಾರದು. ಯಾಕಂದ್ರೆ ಬ್ರೈನ್ ಫಾಗ್ ಡಿಸೀಸ್ ಎಂಬ ಖಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಬ್ರೈನ್ ಫಾಗ್ ಅನ್ನೋದು ಒಬ್ಬ ವ್ಯಕ್ತಿಯು ಮಾನಸಿಕ ಒತ್ತಡವನ್ನು ಅನುಭವಿಸುವ ಸ್ಥಿತಿಯಾಗಿದೆ.
ಈ ಸ್ಥಿತಿಯು ವ್ಯಕ್ತಿಯ ಸ್ಮರಣೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ದೈನಂದಿನ ಕಾರ್ಯಗಳಲ್ಲಿ ಸರಿಯಾಗಿ ಗಮನಹರಿಸಲು ಕಷ್ಟವಾಗಬಹುದು. ಬ್ರೈನ್ ಫಾಗ್ ಸಮಸ್ಯೆ ಇರುವವರಿಗೆ ಒಂದೇ ಕಾರ್ಯದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ದೀರ್ಘಕಾಲದವರೆಗೆ ಒಂದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಕೂಡ ಸಾಧ್ಯವಾಗುವುದಿಲ್ಲ.
ಬ್ರೈನ್ ಫಾಗ್ ಕಾಯಿಲೆ ಎಂದರೇನು ?
ಬ್ರೈನ್ ಫಾಗ್ ಅನ್ನೋದು ಅಧಿಕೃತ ವೈದ್ಯಕೀಯ ಸ್ಥಿತಿಯಲ್ಲ. ಯೋಚಿಸಲು, ಅರ್ಥಮಾಡಿಕೊಳ್ಳಲು ಅಥವಾ ನೆನಪಿಟ್ಟುಕೊಳ್ಳಲು ಕಷ್ಟವಾಗುವ ಸ್ಥಿತಿ ಇದು. ಅನಿಯಮಿತ ನಿದ್ರೆ, ಅತಿಯಾದ ಕೆಲಸ, ಒತ್ತಡ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಇದು ಹೆಚ್ಚಾಗಿ ಸಂಭವಿಸಬಹುದು.
ಬ್ರೈನ್ ಫಾಗ್ ಏಕೆ ಸಂಭವಿಸುತ್ತದೆ ?
ಹೆಚ್ಚು ಒತ್ತಡ: ನಿರಂತರವಾಗಿ ಹೆಚ್ಚುತ್ತಿರುವ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಇದು ಮೆದುಳಿನ ಕಾರ್ಯದಲ್ಲಿ ಕುಸಿತಕ್ಕೆ ಕಾರಣವಾಗಬಹುದು.
ಅನಿಯಮಿತ ನಿದ್ರೆ: ಸರಿಯಾದ ಸಮಯಕ್ಕೆ ಸಾಕಷ್ಟು ನಿದ್ದೆ ಮಾಡದಿರುವುದು ಕೂಡ ಬ್ರೈನ್ ಫಾಗ್ ಸಮಸ್ಯೆಗೆ ಕಾರಣವಾಗುತ್ತದೆ.
ಅತಿಯಾದ ಕೆಫೀನ್ ಮತ್ತು ಆಲ್ಕೋಹಾಲ್: ಇವುಗಳ ಅತಿಯಾದ ಸೇವನೆಯು ಬ್ರೈನ್ ಫಾಗ್ ಉಂಟುಮಾಡುವ ಸಾಧ್ಯತೆ ಇರುತ್ತದೆ.
ಇತರ ಕಾರಣಗಳು: ಕೆಲವು ಕಾಯಿಲೆಗಳು, ಔಷಧದ ಅಡ್ಡಪರಿಣಾಮಗಳು, ಅತಿಯಾದ ಸಕ್ಕರೆ ಸೇವನೆ ಮತ್ತು ಹಾರ್ಮೋನ್ ಅಸಮತೋಲನ ಕೂಡ ಬ್ರೈನ್ ಫಾಗ್‌ಗೆ ಕಾರಣವಾಗಿರಬಹುದು.
ಬ್ರೈನ್ ಫಾಗ್ ತಪ್ಪಿಸುವುದು ಹೇಗೆ ?
ನಿಯಮಿತ ವ್ಯಾಯಾಮ, ಸರಿಯಾದ ನಿದ್ದೆ ಮತ್ತು ಸಮತೋಲಿತ ಆಹಾರ, ಧ್ಯಾನ ಮತ್ತು ಯೋಗದಂತಹ ನೈಸರ್ಗಿಕ ಪರಿಹಾರಗಳಿವೆ. ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇದೆ ಎಂದು ಅನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಣ್ಣಪುಟ್ಟ ವಿಷಯಗಳನ್ನು ಮರೆಯಲು ಕಾರಣ ಏನೆಂದು ಅರ್ಥಮಾಡಿಕೊಳ್ಳಿ. ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಬ್ರೈನ್ ಫಾಗ್‌ನಂತಹ ಸಮಸ್ಯೆಯಿಂದಲೂ ಪಾರಾಗಬಹುದು.