ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರನ್ನು ಭೇಟಿ ಮಾಡುವುದು, ಔಷಧ ತೆಗೆದುಕೊಳ್ಳುವುದು ಸಾಮಾನ್ಯ ಸಂಗತಿ. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ ಚೇತರಿಸಿಕೊಳ್ಳುವುದು ವಿಳಂಬವಾಗುತ್ತದೆ. ಹೆಚ್ಚಿನ ಜನರ ಸಮಸ್ಯೆಯೆಂದರೆ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದನ್ನು ಅವರು ಮರೆತುಬಿಡುತ್ತಾರೆ. ಈ ಸಮಸ್ಯೆಗೆ ಆಂಡ್ರಾಯ್ಡ್ ಫೋನ್‌ನಲ್ಲಿ ಪರಿಹಾರವಿದೆ. ಔಷಧಿ ಸೇವಿಸಲು ನೆನಪಿಸುವ ಫೀಚರ್ ಈಗ ಫೋನ್‌ನಲ್ಲಿ ಲಭ್ಯವಿದೆ.
Android ಸ್ಮಾರ್ಟ್‌ಫೋನ್ ಬಳಕೆದಾರರು ಈ ಫೀಚರ್ ಮೂಲಕ ಔಷಧಿಗಳನ್ನು ಟ್ರ್ಯಾಕ್ ಮಾಡಬಹುದು, ಅವುಗಳನ್ನು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ಸಹ ಇದು ನೆನಪಿಸುತ್ತದೆ. Samsung Health ಅಪ್ಲಿಕೇಶನ್‌ನಲ್ಲಿ ಈ ಹೊಸ ಫೀಚರ್ ಲಭ್ಯವಿದೆ. ನೀವು ತೆಗೆದುಕೊಳ್ಳುವ ಔಷಧಿಗಳ ವಿಧಗಳು, ಅವುಗಳನ್ನು ಯಾವಾಗ ತೆಗೆದುಕೊಳ್ಳಬೇಕು ಮತ್ತು ನೀಡಲಾದ ಮಾತ್ರೆಗಳ ಗಾತ್ರ ಮತ್ತು ಬಣ್ಣದ ವಿವರ ಎಲ್ಲವನ್ನೂ ಇದರಲ್ಲಿ ಫೀಡ್ ಮಾಡಿಕೊಳ್ಳಬಹುದು.
ಔಷಧಗಳಲ್ಲಿ ಯಾವುದಾದರೂ ಅಡ್ಡಪರಿಣಾಮಗಳಿದೆಯೇ ಎಂಬ ವಿವರಗಳನ್ನು ಕೂಡ ಈ ಅಪ್ಲಿಕೇಷನ್ ಬಳಕೆದಾರರಿಗೆ ತಿಳಿಸುತ್ತದೆ. ನೀಡಿದ ಮಾತ್ರೆಗಳಲ್ಲಿ ಏನಾದರೂ ತೊಂದರೆಯಿದ್ದರೆ ಅದನ್ನೂ ತಿಳಿಸುತ್ತದೆ. ಎಲ್ಸೆವಿಯರ್ ಎಂಬ ಕಂಪನಿಯ ತಜ್ಞರ ಸಹಾಯದಿಂದ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
Android 8.0 ಅಥವಾ ಅದಕ್ಕಿಂತ ಹೆಚ್ಚಿನ ಫೋನ್ ಹೊಂದಿದ್ದರೆ ಈ ಫೀಚರ್ ಅನ್ನು ಅಳವಡಿಸಿಕೊಳ್ಳಬಹುದು. ನವೀಕರಿಸಿದ Samsung Health ಅಪ್ಲಿಕೇಶನ್ ಆವೃತ್ತಿ 6.26 ಅಥವಾ ನಂತರದ ಆವೃತ್ತಿಯನ್ನು ಬಳಸಿ. ನೀವು ಬಳಸುತ್ತಿರುವ ಫೋನ್‌ಗೆ ಅನುಗುಣವಾಗಿ ಹೆಲ್ತ್ ಅಪ್ಲಿಕೇಷನ್‌ನ ಮೆಡಿಸಿನ್ ಫೀಚರ್ ಬದಲಾಗಬಹುದು.