ಜೈಪುರ: ಈ ಹಿಂದೆ ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ನುಣುಪಾಗುವಂತೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದ ಮಾತು ನಿಮಗೆ ನೆನಪಿರಬಹುದು. ಇದೀಗ ಹೊಸದಾಗಿ ರಾಜಸ್ಥಾನದ ಸಚಿವ ರಾಜೇಂದ್ರ ಗೂಢಾ ಅವರು ಕೂಡ ಇದೇ ರೀತಿಯ ಮಾತುಗಳನ್ನಾಡಿದ್ದಾರೆ. ಅವರು, ಕತ್ರಿನಾ ಕೈಫ್ ಕೆನ್ನೆಯಂತೆ ತಮ್ಮ ಹಳ್ಳಿಗಳ ರಸ್ತೆಗಳು ಸುಗಮವಾಗಿರಬೇಕು ಎಂದು ಅಧಿಕಾರಿಯೊಬ್ಬರಿಗೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಆರಂಭದಲ್ಲಿ, ಹೇಮಾಮಾಲಿನಿ ಅವರ ಕೆನ್ನೆಯಂತೆ ರಸ್ತೆಗಳನ್ನು ನಿರ್ಮಿಸಬೇಕು ಎಂದು ಸಚಿವರು ಅಧಿಕಾರಿಗೆ ತಿಳಿಸಿದ್ದಾರೆ. ಬಳಿಕ ಹೇಮಾ ಮಾಲಿನಿಗೆ ಈಗ ವಯಸ್ಸಾಗಿದೆ ಎಂದು ಅರಿತ ಅವರು, ಇದೀಗ ಯಾವ ನಟಿ ಜನಪ್ರಿಯತೆ ಪಡೆದಿದ್ದಾರೆ ಎಂದು ಅಲ್ಲಿದ್ದ ಜನರನ್ನು ಕೇಳಿದ್ದಾರೆ ಈ ವೇಳೆ ನಟಿ ಕತ್ರೀನಾ ಕೈಫ್ ಹೆಸರು ಕೇಳಿ ಬಂದಿದೆ. ಆಗ ಸಚಿವರು, ಕತ್ರಿನಾ ಕೈಫ್ ಅವರ ಕೆನ್ನೆಯಂತೆಯೇ ತಮ್ಮ ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದ್ದಾರೆ.
ಭಾನುವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಬಿಎಸ್ಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡ ರಾಜೇಂದ್ರ ಸಿಂಗ್ ಗೂಢಾ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಅವರು ಹೇಳಿರುವ ವಿಡಿಯೊ ವೈರಲ್ ಆದ ನಂತರ, ಅನೇಕರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಹಿಳೆಯರನ್ನು ಆಕ್ಷೇಪಿಸುವ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.