
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಶಂಕರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ನರೇಂದ್ರ ಕುಮಾರ್ ಅವರನ್ನು ಶಿವಮೊಗ್ಗ ಅರಣ್ಯ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಮಾಡಿ ಆದೇಶಿಸಿದ್ದಾರೆ.
ನರೇಂದ್ರ ಕುಮಾರ್ ಅವರು ಮಾತನಾಡಿದ್ದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮುಖ್ಯಮಂತ್ರಿ ಮತ್ತು ಸ್ಥಳೀಯ ಶಾಸಕರನ್ನು ನಿಂದಿಸಿರುವುದು ಆಡಿಯೋದಲ್ಲಿತ್ತು ಎನ್ನಲಾಗಿದೆ.
ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಅಗೌರವ ತೋರಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಶಂಕರ ವಲಯದ ಉಪ ಅರಣ್ಯ ಅಧಿಕಾರಿ ಬಿ.ಜಿ. ನರೇಂದ್ರ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಇಲಾಖೆಯ ಶಿಸ್ತು ಪ್ರಾಧಿಕಾರ ಸಿಸಿಎಫ್ ಗೆ ವರದಿ ನೀಡಿತ್ತು. ಇದರ ಆದರದ ಮೇಲೆ ಸಿಸಿಎಫ್ ಅವರು ನರೇಂದ್ರ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಆದರೆ, ತಮ್ಮ ಮೇಲಿನ ಆರೋಪ ಸುಳ್ಳು. ಸರ್ಕಾರಿ ನೌಕರನಾಗಿದ್ದು, ಮುಖ್ಯಮಂತ್ರಿ ಮತ್ತು ಶಾಸಕರ ಬಗ್ಗೆ ಗೌರವ ಹೊಂದಿದ್ದೇನೆ. ತಮ್ಮ ಹೆಸರು ಹಾಳು ಮಾಡುವ ಉದ್ದೇಶದಿಂದ ತಮ್ಮ ಧ್ವನಿಯನ್ನು ಬೇರೆ ವ್ಯಕ್ತಿಗಳಿಂದ ಯಾರೋ ನಕಲು ಮಾಡಿಸಿದ್ದಾರೆ ಎಂದು ನರೇಂದ್ರ ಕುಮಾರ್ ಹೇಳಿದ್ದಾರೆ.