ಹುಲಿಗಳು ಸರ್ವೋತ್ತಮ ಬೇಟೆಗಾರರು ಎಂಬುದು ಜಗತ್ತಿಗೇ ತಿಳಿದಿರುವ ಸತ್ಯ. ಆದರೂ ಸಹ ಕಾಡಿನಲ್ಲಿ ಆನೆಗಳಿಗೆ ಅವುಗಳದ್ದೇ ಆದ ರಾಜ ಮರ್ಯಾದೆ ಇದೆ. ಅದರಲ್ಲೂ ಹಿಂಡಿನಲ್ಲಿ ಬಂದಾಗ ಆನೆಗಳಿಗೆ ಹುಲಿ, ಸಿಂಹಗಳೂ ಸಹ ಹೆದರಿ, ಅವುಗಳ ದಾರಿಗೆ ಅಡ್ಡ ಬರುವುದಿಲ್ಲ.
’ಆನೆ ನಡೆದಿದ್ದೇ ದಾರಿ’ ಎಂಬ ಮಾತಿಗೆ ಸಾಕ್ಷಾತ್ ನಿದರ್ಶನದಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಿನ ಹಾದಿಯಲ್ಲಿ ಮಳೆಯ ನಡುವೆ ಹೋಗುತ್ತಿರುವ ಹುಲಿಯೊಂದು ಆನೆಗಳ ಹಿಂಡು ತನ್ನ ದಾರಿಗೆ ಅಡ್ಡಲಾಗಿ ಬರುತ್ತಿರುವುದನ್ನು ದೂರದಿಂದಲೇ ಗ್ರಹಿಸಿದ ಕೂಡಲೇ, ಅಲ್ಲೇ ಬೇಲಿಯ ಪಕ್ಕದಲ್ಲಿ ಅಡಗಿ ಕುಳಿತು, ಗಜಪಡೆ ತನ್ನ ಹಾದಿಯನ್ನು ದಾಟಿ ಹೋಗುವವರೆಗೂ ಕಾಯುತ್ತದೆ.
“ಪ್ರಾಣಿಗಳು ಪರಸ್ಪರ ಸಂಪರ್ಕ ಸಾಧಿಸಿಕೊಂಡು, ಸಾಮರಸ್ಯ ಕಾಯ್ದುಕೊಳ್ಳುವ ರೀತಿ ಇದು……. ಹುಲಿಯ ಸೂಚನೆ ಕಂಡೊಡನೆಯೇ ಆನೆ ಘೀಳಿಡುತ್ತದೆ. ರಾಜ ಗಜಪಡೆಗೆ ದಾರಿ ಬಿಟ್ಟುಕೊಡುತ್ತಾನೆ,” ಎಂದು ಈ ವಿಡಿಯೋ ಶೇರ್ ಮಾಡಿದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತಾ ನಂದಾ ಕ್ಯಾಪ್ಷನ್ ಹಾಕಿದ್ದಾರೆ.
ಸಾಮಾನ್ಯವಾಗಿ ಹುಲಿಗಳು ಮಧ್ಯಮ ಗಾತ್ರದ ಪ್ರಾಣಿಗಳಾದ ಜಿಂಕೆಗಳು, ಕೋತಿಗಳು, ಕಾಡು ಹಂದಿಗಳನ್ನು ಬೇಟೆಯಾಡುತ್ತವೆ. ಆದರೆ ಆನೆಗಳ ಮೇಲೆ ದಾಳಿ ಮಾಡುವುದು ವಿರಳಾತಿವಿರಳವಾಗಿದೆ.