ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವನ್ಯಜೀವಿಗಳ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಸದಾ ಹೆಸರು ವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ತಲೆ ಕೆರೆದುಕೊಳ್ಳುವಂತೆ ಮಾಡುವ ಚಿತ್ರಗಳನ್ನು ಇವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪರ್ವೀನ್ ಕಸ್ವಾನ್ ಅವರು ಕೀಟಗಳ ಪ್ರಮುಖ ರಕ್ಷಣಾತ್ಮಕ ತಂತ್ರಗಳ ಕುರಿತು ಆಸಕ್ತಿದಾಯಕ ವಿಚಾರಗಳನ್ನು ಸುದೀರ್ಘ ವಿವರಣೆಯೊಂದಿಗೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
“ವನ್ಯಜೀವಿಗಳ ಛದ್ಮ ವೇಷ. ಇದು ಅವುಗಳದೇ ಆದ ಆತ್ಮರಕ್ಷಣಾ ತಂತ್ರವಾಗಿದೆ” ಎಂದು ಅವರು ಸಣ್ಣ ವೀಡಿಯೊ ಕ್ಲಿಪ್‌ಗೆ ಶೀರ್ಷಿಕೆ ನೀಡಿದ್ದಾರೆ.
ಮುಂದಿನ ಚಿತ್ರದಲ್ಲಿ ಮರಕುಟಿಗವನ್ನು ನೋಡಬಹುದು. ಅದು ಮರವೇನೋ ಎಂಬಂತೆ ಭಾಸವಾಗುತ್ತದೆ. “ಪ್ರಕೃತಿಯಲ್ಲಿ ವನ್ಯಜೀವಿಗಳು ತಮ್ಮನ್ನು ತಾವು ಮರೆ ಮಾಚಿಕೊಳ್ಳುವುದು ಒಂದು ಪ್ರಮುಖ ಸ್ವ-ರಕ್ಷಣಾ ಕಾರ್ಯವಿಧಾನವಾಗಿದೆ. ಅನೇಕ ಜೀವ ಪ್ರಭೇದಗಳು ಇದನ್ನು ಅನುಸರಿಸುತ್ತವೆ. ರುಫಸ್ ಎನ್ನುವ ಮರಕುಟಿಗವು ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ನೋಡಿದಾಗ ಒಂದು ಕ್ಷಣ ಮರದಿಂದ ಮಾಡಲ್ಪಟ್ಟಿದೆ ಎಂದೇ ತೋರುತ್ತದೆ.”
ಮುಂದಿನ ಚಿತ್ರ ಮರದ ತುಂಡಿನಂತೆ ಕಾಣುವ ಸಾಮಾನ್ಯ ಪ್ಯೂಪಾ. “ಇದು ಸಾಮಾನ್ಯ ಮೈಮ್ ಪ್ಯೂಪಾ. ಕೇವಲ ಮರದ ತುಂಡಿನಂತೆ ಕಾಣುವ ಇದು, ಈ ಹಂತದಲ್ಲಿ ಪಕ್ಷಿಗಳು ಅಥವಾ ಇತರ ಕೀಟಗಳ ವಿರುದ್ಧ ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಇದು ನೋಡುಗರನ್ನು ವಂಚಿಸುವ ರೀತಿಯಲ್ಲಿ ತನ್ನನ್ನು ತಾನು ಮರೆಮಾಚುತ್ತದೆ. ನೋಡ-ನೋಡುತ್ತಲೇ ಪ್ಯೂಪಾ ಸುಂದರವಾದ ಮತ್ತು ವರ್ಣರಂಜಿತ ಚಿಟ್ಟೆಯಾಗುತ್ತದೆ” ಎಂದು ಅರಣ್ಯ ಅಧಿಕಾರಿ ವಿವರಿಸಿದ್ದಾರೆ.
ಮೂರನೆಯ ಚಿತ್ರವು ಸ್ವಲ್ಪ ಭಯಾನಕವಾಗಿದ್ದು ಥೇಟ್ ಕೋಲಿನ ಹಾಗೆ ಕಾಣುವ ಹಾವನ್ನು ನೋಡಬಹುದು. ಕಸ್ವಾನ್ ಅವರು ತಮ್ಮ ಈ ಪೋಸ್ಟ್ ಗೆ, “ಈ ಹಾವನ್ನು ನೋಡಿ. ಇದು ಕೇವಲ ಒಂದು ಸಾಮಾನ್ಯ ಕೋಲಿನಂತೆ ಕಾಣುತ್ತದೆ. ನಾನು ಕಾಡಿನಲ್ಲಿ ಸುಮ್ಮನೆ ನಡೆಯುತ್ತಿರುವಾಗ ಕ್ಲಿಕ್ ಮಾಡಿದ್ದೇನೆ. ಈ ಹಾವನ್ನು ಅಣಕು ವೈಪರ್ ಎಂದು ಕರೆಯಬಹುದು. ನೋಡಲು ಥೇಟ್ ಕೋಲಿನಂತೆ ಕಾಣುವ ಇದು ಸ್ವಲ್ಪ ಮಟ್ಟಿಗೆ ವಿಷಕಾರಿ ಎಂದು ವಿವರಿಸಿದ್ದಾರೆ.