ಬೆಂಗಳೂರು: ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಬಿಬಿಎಂಪಿ ಮಾದರಿಯಲ್ಲಿ ಏಕರೂಪ ತೆರಿಗೆ ವಿಧಿಸುವುದು ಸೂಕ್ತ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು 21ರ ಅಂಶಗಳನ್ನು ರಾಜ್ಯದ ಇತರೆ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಪುರಸಭೆ ಕಾಯ್ದೆ 1964 ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ ಬಾಧಕ ಪರಿಶೀಲಿಸಲು ಸೂಕ್ತ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ರಚಿಸಲಾದ ಸಂಪುಟ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡಾವಣೆಯ ಅನುಮೋದನೆ, ನಕ್ಷೆ ಮಂಜೂರಾತಿ ಇಲ್ಲದೆ ನಿಯಮ ಉಲ್ಲಂಘಿಸಿ ಕಂದಾಯ ಭೂಮಿಯಲ್ಲಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ಬಿಬಿಎಂಪಿ ರೀತಿಯಲ್ಲಿ ರಾಜ್ಯದಾದ್ಯಂತ ಏಕರೂಪವಾಗಿ ತೆರೆಗೆ ವಿಧಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳಿಗೆ ಒಂದು ಸಲ ಅವಕಾಶ ನೀಡಿ ದಂಡ ವಿಧಿಸಿ, ಮೊದಲ ವರ್ಷ ದುಪ್ಪಟ್ಟು ತೆರಿಗೆ ವಿಧಿಸಿ ನಂತರದ ವರ್ಷಗಳಲ್ಲಿ ನಿಯಮಿತವಾಗಿ ತೆರಿಗೆ ವಿಧಿಸಬಹುದು. ಇನ್ನು ಮುಂದೆ ಯಾರೇ ಅನಧಿಕೃತವಾಗಿ ಬಡಾವಣೆ ನಿರ್ಮಾಣ ಮಾಡಿ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಅಂತವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತಹ ಕಾನೂನು ತರುವುದು ಅಗತ್ಯವಾಗಿದೆ. ಇಲ್ಲದಿದ್ದರೆ ನಾಯಿಕೊಡೆಗಳ ರೀತಿ ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಕಾನೂನು ತಂದು ಕಟ್ಟುನಿಟ್ಟಿನ ಜಾರಿ ಅಗತ್ಯವಿದೆ ಎಂದು ಹೇಳಿದ್ದಾರೆ.