ಬೆಂಗಳೂರು: ರಾಜ್ಯ ಸರ್ಕಾರ ರೈತರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ರೈತರು ಸಾಗುವಳಿ ಮಾಡುತ್ತಿರುವ ಜಮೀನನ್ನು ಅವರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗುವುದು.
ಅನೇಕ ವರ್ಷಗಳಿಂದ ಬ್ಯಾಣ, ಕುಮ್ಕಿ, ಬೆಟ್ಟ, ಹಾಡಿ, ಸೊಪ್ಪಿನಬೆಟ್ಟ, ಕಾನು, ಜಮ್ಮಮಲೈ, ಮೇಟಸ್ಥಳ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಭೂಮಿ ಜಮೀನು ಹಾಗೂ ರೈತರ ಸ್ವಾಧೀನದಲ್ಲಿರುವ ಜಮೀನನ್ನ ಸಾಗುವಳಿ ಮಾಡುತ್ತಿರುವ ರೈತರಿಗೆ ನೀಡಲು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ.
ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಇಲಾಖೆಗಳ ಭೂಮಿಗೆ ಸಂಬಂಧಿಸಿದಂತೆ ಗೊಂದಲ ನಿವಾರಿಸಲು ಕೂಡ ಕ್ರಮಕೈಗೊಳ್ಳಲಾಗಿದೆ. ಕರಾವಳಿ, ಮಲೆನಾಡು ಭಾಗದ ಹೆಚ್ಚಿನ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಸುಮಾರು 7 -8 ಲಕ್ಷ ಹೆಕ್ಟೇರ್ ನಷ್ಟು ಭೂಮಿ ಉಳುಮೆ ಮಾಡುವವರಿಗೆ ಸಿಗಲಿದೆ. ಇಷ್ಟೊಂದು ಪ್ರಮಾಣದಲ್ಲಿ ಅರಣ್ಯಭೂಮಿ ಕಡಿಮೆಯಾಗುತ್ತಿರುವುದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿದೆ ಎನ್ನಲಾಗಿದೆ.