
ರಾಮನಗರ: ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹೂಳ್ಯ ಗ್ರಾಮದ ರಾಜಪ್ಪ (42) ಬಂಧಿತ ಆರೋಪಿ. ಹೊಸ ಹುಲ್ಲು ಚಿಗುರಲಿ ಎಂದು ರಾಜಪ್ಪ ಸಂಗಮ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಬೆಂಕಿ ಹಚ್ಚಿದ್ದ. ಪರಿಣಾಮ 30 ಎಕರೆ ಅರಣ್ಯ ಸುಟ್ಟು ಕರಕಲಾಗಿತ್ತು.
ರಾಜಪ್ಪ ಕುರಿಗಾಹಿಯಾಗಿದ್ದು, ಮೇಕೆ ಮೇಯಿಸಲು ಹೋಗಿದ್ದಾಗ ಅರಣ್ಯದಲ್ಲಿರುವ ಒಣಗಿರುವ ಹುಲ್ಲು ಸುಟ್ಟರೆ ಹೊಸ ಹುಲ್ಲು ಚಿಗುರುತ್ತದೆ. ಇದರಿಂದ ಕುರಿ, ಮೇಕೆಗಳಿಗೆ ಮೇವು ಸಿಗುತ್ತದೆ ಎಂದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದ. ಬೆಂಕಿಯ ಕೆನ್ನಾಲಿಗೆ ಅರಣ್ಯದ ತುಂಬೆಲ್ಲ ವ್ಯಾಪಿಸುತ್ತಿದ್ದಂತೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ 30 ಎಕರೆ ಅರಣ್ಯ ಸಂಪತ್ತು ನಾಶವಾಗಿದೆ.
ವನ್ಯಜೀವಿ ವಲಯಕ್ಕೆ ಎಂಟ್ರಿಯಾಗಿದ್ದ ರಾಜಪ್ಪನನ್ನು ಹಿಡಿದು ಪ್ರಶ್ನೆ ಮಾಡಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.