ಬೆಂಗಳೂರು: ಅರಣ್ಯ ಒತ್ತುವರಿ ತಡೆಗೆ ಉಪಗ್ರಹ ಚಿತ್ರ ಆಧರಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಅವ್ಯಾಹತವಾಗಿ ಅರಣ್ಯ ಒತ್ತುವರಿ ನಡೆಯುತ್ತಿದೆ. ಹೀಗಾಗಿ ಅರಣ್ಯದ ಉಪಗ್ರಹ ಆಧರಿತ ಚಿತ್ರಗಳನ್ನು ನಿರಂತರವಾಗಿ ಪರಿಶೀಲಿಸಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಪಟ್ಟಾ ಜಮೀನಿನ ಸ್ವಾಧೀನದಲ್ಲಿ ಅರಣ್ಯ ಇಲಾಖೆ ಭೂಮಿ ಇದ್ದರೆ ಅಂತಹ ಜಮೀನುಗಳನ್ನು ಇತ್ಯರ್ಥಪಡಿಸಬೇಕು. ಅರಣ್ಯ ಮತ್ತು ಪಟ್ಟಾ ಭೂಮಿಯಲ್ಲಿ ಮರಗಳ ಅಕ್ರಮ ಕಡಿತಲೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲಾ ರೀತಿಯ ಹಣ ಸ್ವೀಕೃತಿಗೆ ಆನ್ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ತ್ವರಿತ ಕ್ರಮ ವಹಿಸಬೇಕು. ಚಾರಣ ಪಥಗಳಲ್ಲಿ ಆನ್ಲೈನ್ ಬುಕಿಂಗ್ ವ್ಯವಸ್ಥೆ ಜಾರಿಗೆ ಸಾಫ್ಟ್ ವೇರ್ ರೂಪಿಸಬೇಕು. ಕಳೆದ ವರ್ಷ ವನಮಹೋತ್ಸವದಲ್ಲಿ ನೆಟ್ಟ ಸಸಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದ್ದಾರೆ.