ಬೆಂಗಳೂರು: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೀಗ ಒಂದಲ್ಲ, ಎರಡಲ್ಲ ನಾಲ್ಕು ಚಿರತೆಗಳು ಪ್ರತ್ಯಕ್ಷವಾಗಿದ್ದು, ಉತ್ತರಹಳ್ಳಿ ಮುಖ್ಯರಸ್ತೆ ಬಳಿಯೇ ಜಿಂಕೆ ಬೇಟೆಯಾಡಿ ತಿಂದಿರುವುದು ಪತ್ತೆಯಾಗಿದೆ.
ತುರಹಳ್ಳಿ ಅರಣ್ಯ ಭಾಗದಿಂದ ನಾಲ್ಕು ಚಿರತೆಗಳು ಬಂದಿದ್ದು, ಕೋಡಿಪಾಳ್ಯ, ಕೆಂಗೇರಿ ಸುತ್ತಮುತ್ತ ಓಡಾಡುತ್ತಿವೆ. ಇದರಿಂದಾಗಿ ಸುತ್ತಮುತ್ತಲ ನಿವಾಸಿಗಳು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದ್ದು, ಜೀವಭಯದಲ್ಲಿ ಬದುಕುವಂತಾಗಿದೆ. ಈ ಭಾಗದಲ್ಲಿ 5 ಶಾಲೆಗಳಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಆತಂಕಪಡುತ್ತಿದ್ದಾರೆ.
ಬಿಜಿಎಸ್ ಆಸ್ಪತ್ರೆಯ ಹಿಂಬದಿ ಗೇಟ್ ಬಳಿ ಚಿರತೆಗಳು ಜಿಂಕೆಯೊಂದನ್ನು ಬೇಟೆಯಾಡಿ ತಿಂದಿವೆ. ಈ ಭಾಗದ ಸುತ್ತ ಮುತ್ತಲು ಕೆಲ ದಿನಗಳಿಂದ ಚಿರತೆಗಳು ಓಡಾಡುತ್ತಿವೆ. ಹಾಗಾಗಿ ಈ ಪ್ರದೇಶದಲ್ಲಿ ಜನರು ಓಡಾಡಲು ಭಯಪಡುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಚಿರತೆಗಳು ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಅಲರ್ಟ್ ಘೋಷಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಕೋಡಿಪಾಳ್ಯ, ಕೆಂಗೇರಿ ಸುತ್ತಮುತ್ತ ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಇರಿಸಿದ್ದು, ಅದರಲ್ಲಿ ನಾಯಿಮರಿಯನ್ನು ಕಟ್ಟಿಹಾಕಿ ಕಾಯುತ್ತಿದ್ದಾರೆ.