ಶಿವಮೊಗ್ಗ: ಮಹತ್ವದ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜ್ಯದಲ್ಲಿ ಮೊದಲ ಬಾರಿಗೆ ಅತಿ ಬೆಲೆ ಬಾಳುವ ತಮಿಳುನಾಡಿನಲ್ಲಿ ಕಂಡುಬರುವ ಅಪರೂಪದ ಕರಿಮರ(ಡಯಾಸ್ಪಿರೊಸ್) ವಶಕ್ಕೆ ಪಡೆದಿದ್ದಾರೆ.
ವಾಹನ ಸಮೇತ ಮರ ವಶಕ್ಕೆ ಪಡೆದು ಸಾಗಾಣೆದಾರನನ್ನು ಬಂಧಿಸಲಾಗಿದೆ. ಶಿವಮೊಗ್ಗದ ಶಂಕರ ವಲಯ ಅರಣ್ಯ ಅಧಿಕಾರಿಗಳಿಗೆ ಬೀಟೆ ಮರ ಕಳ್ಳ ಸಾಗಣೆ ಮಾಡುತ್ತಿರುವ ಮಾಹಿತಿ ಬಂದಿದ್ದು, ಹೊಳೆಹೊನ್ನೂರು ರಸ್ತೆಯಲ್ಲಿ ವಲಯ ಅರಣ್ಯ ಅಧಿಕಾರಿ ಬಿ. ಸುಧಾಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ತರಕಾರಿ ಸಾಗಿಸುವ ಕ್ರೇಟ್ ಕೆಳಗೆ ಅಪರೂಪದ ಕರಿಮರ ಸಾಗರಿಸಲಾಗುತ್ತಿತ್ತು. ಇದನ್ನು ಬೆಂಗಳೂರಿನಿಂದ ಶಿವಮೊಗ್ಗ, ಭದ್ರಾವತಿಗೆ ತರಲಾಗುತ್ತಿತ್ತು. ಇದರೊಂದಿಗೆ ಬೀಟೆ ಮರ ಕೂಡ ಇತ್ತು. ಈ ಅಪರೂಪದ ಕರಿಮರದ 6 ಅಡಿ ಉದ್ದದ 32 ತುಂಡುಗಳು, ಎರಡು ಬೀಟೆ ಮರದ ತುಂಡು, ಪಿಕಪ್ ವಾಹನ ವಶಕ್ಕೆ ಪಡೆದು ಸಯ್ಯದ್ ಅಜೀಜ್ ರೆಹಮಾನ್(40) ಎಂಬುವನನ್ನು ಬಂಧಿಸಲಾಗಿದೆ.
ಭದ್ರಾವತಿ ನಿವಾಸಿಯಾಗಿರುವ ಸೈಯದ್ ಅಜೀಜ್ ಎಂಟು ತಿಂಗಳಿಂದ ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ವಾಸವಾಗಿದ್ದ. ಈತನ ವಿರುದ್ಧ ಶ್ರೀಗಂಧ ಕಳ್ಳ ಸಾಗಣೆ, ಅಡಕೆ ಕಳವು ಸೇರಿ ಹಲವು ಪ್ರಕರಣಗಳಿವೆ.
ಅಪರೂಪದ ಕರಿಮರ ತಮಿಳುನಾಡಿನಲ್ಲಿ ಕಂಡು ಬರುತ್ತದೆ. ತಮಿಳುನಾಡಿನಲ್ಲಿ 1885ರ ಕಾಯ್ದೆಯ ಮೂಲಕ ಪಟ್ಟಿ ಮಾಡಿದ ಡಯಾಸ್ಪಿರೊಸ್ ಅಬೆನಮ್ ಪ್ರಭೇದದ ಅಪರೂಪದ ಮರದ ಜಾತಿಗಳಲ್ಲಿ ಕರಿಮರ ಕೂಡ ಒಂದಾಗಿದೆ.
ಕರಿಮರ ತಮಿಳು ನಾಡಿನಲ್ಲಿ ಅಮೂಲ್ಯ ಮರವಾಗಿದ್ದು ಈಗ ನಶಿಸುವ ಹಂತತಲುಪಿದೆ. ಅರಣ್ಯ ಸಂಪತ್ತಿನಲ್ಲಿ ಶೆಡ್ಯೂಲ್ಡ್ ಒನ್ ಆಗಿರುವುದರಿಂದ ಈ ಮರ ಹೆಚ್ಚಿನಮೌಲ್ಯ ಪಡೆದುಕೊಂಡಿದೆ.