ಉತ್ತರ ಪ್ರದೇಶ: ಇಲಿಗೆ ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ ಎಂದು ಪ್ರಾಣಿರಕ್ಷಣಾ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಮನೋಜ್ ಕುಮಾರ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಈ ಘಟನೆಗೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ.
ಹೌದು, ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಬುದೌನ್ ನಲ್ಲಿ. ಇಲ್ಲಿ ಇಲಿ ಬಾಲಕ್ಕೆ ಕಲ್ಲು ಕಟ್ಟಿ ಹೊಡೆದು ಚರಂಡಿಗೆ ಹಾಕಲಾಗಿತ್ತು ಎಂದು ಆರೋಪಿಸಲಾಗಿತ್ತು. ಇನ್ನು ಈ ಸಂಬಂಧ ಪಶುಸಂಗೋಪನ ಆಸ್ಪತ್ರೆಯಲ್ಲಿ ಈ ಇಲಿಯ ಶವಪರೀಕ್ಷೆ ನಡೆಯಬೇಕಿತ್ತು. ಆದರೆ ಅಲ್ಲಿನ ಸಿಬ್ಬಂದಿ ಒಪ್ಪಲಿಲ್ಲ. ನಂತರ ಭಾರತೀಯ ಪಶುಸಂಗೋಪನಾ ಸಂಶೋಧನಾ ಸಂಸ್ಥೆಗೆ ಶವಪರೀಕ್ಷೆಗೆ ಕಳುಹಿಸಲಾಯ್ತು.
ಶವ ಪರೀಕ್ಷೆ ನಡೆಸಿದ ಇಬ್ಬರು ವೈದ್ಯರು ಇದೀಗ ವರದಿ ಕೊಟ್ಟಿದ್ದಾರಂತೆ. ಕಲ್ಲಿನ ಹೊಡೆತದಿಂದ ಇಲಿ ಸತ್ತಿಲ್ಲ. ಬದಲಾಗಿ ಸೋಂಕಿನಿಂದಾಗಿ ಇಲಿಯ ಶ್ವಾಸಕೋಶದಲ್ಲಿ ಊತ ಕಂಡುಬಂದಿದೆ. ಇಲಿಯ ಸಾವಿಗೆ ಸೋಂಕು ಕಾರಣವಾಗಿದೆ ಎಂದು ವರದಿ ನೀಡಲಾಗಿದೆ. ಮನೋಜ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಈಗ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.