ಬೆಂಗಳೂರು: ಇಥಿಯೋಪಿಯಾದಿಂದ ಬೆಂಗಳೂರಿಗೆ ಬಂದಿದ್ದ ವಿದೇಶಿಗನ ಹೊಟ್ಟೆಯಲ್ಲಿ 11 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಮಾತ್ರೆಗಳು ಪತ್ತೆಯಾಗಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆಫ್ರಿಕನ್ ಪ್ರಜೆಯ ಹೊಟ್ಟೆಯಲ್ಲಿ 64 ಕೊಕೇನ್ ಗುಳಿಗೆಗಳು ಪತ್ತೆಯಾಗಿವೆ. ಮಾದಕ ವಸ್ತು ಕಳ್ಳ ಸಾಗಾಣೆ ಆರೋಪದಲ್ಲಿ 40 ವರ್ಷದ ಇಥಿಯೋಪಿಯಾ ಪ್ರಜೆಯನ್ನು ಬಂಧಿಸಲಾಗಿದೆ.
ಬೆಂಗಳೂರಿಗೆ ವಿದೇಶಿ ಪೆಡ್ಲರ್ ನನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಮಾಡುವಾಗ ಈತ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಆತನನ್ನು ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿದಾಗ ಹೊಟ್ಟೆಯಲ್ಲಿ ಗುಳಿಗೆಗಳು ಇರುವುದು ಕಂಡು ಬಂದಿದೆ. ಆತನನ್ನು ವಶಕ್ಕೆ ಪಡೆದು ವೈದ್ಯರ ಸಹಾಯದಿಂದ ಗುಳಿಗೆಗಳನ್ನು ಹೊರಗೆ ತೆಗೆಸಿ ಪರಿಶೀಲಿಸಿದಾಗ ಮಾದಕ ವಸ್ತು ಗುಳಿಗೆಗಳು ಎಂದು ಗೊತ್ತಾಗಿದೆ. ತನಿಖೆ ಮುಂದುವರೆಸಲಾಗಿದೆ.