ಹುಬ್ಬಳ್ಳಿ: ದಲಿತ ಯುವಕನೊಬ್ಬನನ್ನು ಒತ್ತಾಯಪೂರ್ವಕವಾಗಿ ಶಿಶ್ನದ ತುದಿ ಚರ್ಮ ಕತ್ತರಿಸಿ(ಖತ್ನಾ) ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಲೆತ್ನಿಸಿದ ಆರೋಪದ ಮೇಲೆ 11 ಮಂದಿ ವಿರುದ್ಧ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ್ ಗಂಗಾಧರ(26) ಮತಾಂತರಕ್ಕೆ ಒಳಗಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಮ್ ಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಆನ್ಸರ್ ಪಾಷಾ, ಸೈಯದ್ ದಸ್ತಗೀರ್, ಮೊಹಮ್ಮದ್ ಇಕ್ಬಾಲ್, ರಫೀಕ್, ಶಬ್ಬೀರ್, ಖಾಲಿದ್ ಶಾಕಿಲ್, ಅಲ್ತಾಫ್ ಎಂಬುವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಮೇ ತಿಂಗಳಲ್ಲಿ ಶ್ರೀಧರ್ ಅವರನ್ನು ಬೆಂಗಳೂರಿಗೆ ಕರೆದೊಯ್ದ ಆರೋಪಿಗಳು ಬನಶಂಕರಿಯ ಮಸೀದಿಯಲ್ಲಿ ಬಲವಂತವಾಗಿ ಬಂಧಿಸಿಟ್ಟು, ನಂತರ ಇಸ್ಲಾಂ ಧರ್ಮಕ್ಕೆ ಸೇರುವಂತೆ ಖತ್ನಾ ಮಾಡಿದ್ದಾರೆ. ದನದ ಮಾಂಸ ತಿನ್ನಲು ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ. ಬಾಂಡ್ ಪೇಪರ್ ನಲ್ಲಿ ಸಹಿ ಪಡೆದುಕೊಂಡಿದ್ದು, ನಂತರ ತಿರುಪತಿಗೆ ಕರೆದೊಯ್ದು ಇಸ್ಲಾಂ ಧರ್ಮದ ಪ್ರಾರ್ಥನೆ ಮತ್ತು ಪದ್ಧತಿಗಳ ಬಗ್ಗೆ ತರಬೇತಿ ನೀಡಿದ್ದಾರೆ. ಪ್ರತಿ ವರ್ಷ ಮೂವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವಂತೆ ಬೆದರಿಕೆ ಹಾಕಿದ್ದಾರೆ.
ಇದಲ್ಲದೆ ಕೈಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹೇಳಿದಂತೆ ಕೇಳದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದಕನೆಂದು ಫೋಟೋ ಹರಿಬಿಡುವುದಾಗಿ ಬೆದರಿಸಿದ್ದಾರೆ. ಬ್ಯಾಂಕ್ ಖಾತೆಗೆ 35 ಸಾವಿರ ರೂಪಾಯಿ ಹಣ ಹಾಕಿ ಹೇಳಿದಂತೆ ಕೇಳುವಂತೆ ಬೆದರಿಕೆ ಹಾಕಿದ್ದಾರೆ.
ಈ ನಡುವೆ ಶ್ರೀಧರ್ ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹುಬ್ಬಳ್ಳಿ ಯುವತಿ ಪರಿಚಯವಾಗಿದ್ದು, ಆಕೆಯೊಂದಿಗೆ ಚಾಟಿಂಗ್ ಮಾಡಿದ ಶ್ರೀಧರ್ ಆಕೆ ಆಹ್ವಾನಿಸಿದಂತೆ ಸೆಪ್ಟೆಂಬರ್ 18 ರಂದು ಹುಬ್ಬಳ್ಳಿಗೆ ಬಂದಿದ್ದಾನೆ. ಸೆಪ್ಟೆಂಬರ್ 21 ರ ರಾತ್ರಿ ಬೈರಿದೇವರಕೊಪ್ಪದಲ್ಲಿ ಓಡಾಡುವಾಗ ಅಪರಿಚಿತರು ಹಲ್ಲೆ ಮಾಡಿದ್ದಾರೆ. ಶ್ರೀಧರ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ವೇಳೆ ಬಲವಂತದಿಂದ ಮತಾಂತರ ಮಾಡಿರುವ ವಿಷಯ ಬಯಲಾಗಿ ಶನಿವಾರ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.