ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ತನ್ನ ವಾಹನಗಳ ಗಟ್ಟಿತನ ಹಾಗೂ ಸಾಮರ್ಥ್ಯಗಳಿಂದಾಗಿ ತನ್ನದೇ ಹೆಸರು ಪಡೆದಿರುವ ಫೋರ್ಸ್ ಮೋಟಾರ್ಸ್ ಇದೀಗ 10-ಸೀಟರ್ ವಾಹನವೊಂದನ್ನು ಬಿಡುಗಡೆ ಮಾಡಿದೆ.
ಸಿಟಿಲಿನ್ ಎಂಯುವಿ ಹೆಸರಿನ ಈ ವಾಹನದ ಆರಂಭಿಕ ಬೆಲೆ 15.93 ಲಕ್ಷ (ಎಕ್ಸ್-ಶೋರೂಂ) ಹೊಂದಿದೆ. ಟ್ರಾಕ್ಸ್ ಕ್ರೂಸರ್‌ನ ಸುಧಾರಿತ ಅವತಾರ ಇದಾಗಿದೆ.
ಹೆಸರೇ ಸೂಚಿಸುವಂತೆ 10 ಮಂದಿಯನ್ನು ಸರಾಗವಾಗಿ ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಸಿಟಿಲಿನ್, ಸಾಲ್ಕು ಸಾಲಿನ ಸೀಟುಗಳನ್ನು ಹೊಂದಿದೆ. ಎರಡನೇ ಸಾಲಿನಲ್ಲಿ ಹಿಂಬದಿಯ ಆಸನಗಳಿಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಬೇಸಿಕ್ ಮಟ್ಟದ ಒಳಾಂಗಣ ಹೊಂದಿರುವ ಸಿಟಿಲಿನ್‌ನಲ್ಲಿ ಇನ್ಫೋಟೇನ್ಮೆಂಟ್ ವ್ಯವಸ್ಥೆಗಳಿಲ್ಲ.
5,120 ಮಿಮೀ ಉದ್ದವಿರುವ ಸಿಟಿಲಿನ್, ಲ್ಯಾಂಡ್ ರೋವರ್ ಡಿಫೆಂಡರ್‌ಗಿಂತ 238 ಮಿಮೀ ಕಡಿಮೆ ಇದೆ.
ಮರ್ಸಿಡಿಸ್ ಬೆಂಜ಼್‌ನ 2.6ಲೀ ಡೀಸೆಲ್ ಎಂಜಿನ್ ಮೂಲಕ 91 ಎಚ್‌ಪಿ ಮತ್ತು 250 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಇರುವ ಸಿಟಿಲಿನ್ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಎಬಿಎಸ್ ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋಸ್ಟ್ ವಿತರಣೆ ವ್ಯವಸ್ಥೆ (ಇಬಿಡಿ) ಸಹ ಸಿಟಿಲಿನ್‌ನಲ್ಲಿವೆ.
ಇದೇ ವೇಳೆ, ಐದು ಬಾಗಿಲುಗಳ ಗೂರ್ಖಾ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಫೋರ್ಸ್ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಮೂರು ಬಾಗಿಲುಗಳ ಗೂರ್ಖಾ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿವೆ.