ತಾಯ್ತನ ಪ್ರತಿ ಮಹಿಳೆಯ ಜೀವನದಲ್ಲಿ ಮರೆಯಲಾಗದ ಕ್ಷಣ. ಗರ್ಭಾವಸ್ಥೆಯ ಅವಧಿಯು ಬಹಳ ಅಮೂಲ್ಯವಾಗಿರುತ್ತದೆ. ಆದರೆ ಈ ಪ್ರಯಾಣದಲ್ಲಿ ಗರ್ಭಿಣಿಯರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ. ಹಾಗಾಗಿ ಗರ್ಭಿಣಿಯರು ತಮ್ಮ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಲಗುವ ಮುನ್ನ ಏನು ಮಾಡಬೇಕು? ಅದರಿಂದ ಯಾವ ರೀತಿ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
ಮಲಗುವ ಭಂಗಿ!
ಗರ್ಭಾವಸ್ಥೆಯಲ್ಲಿ ಮಹಿಳೆಯರು ಚೆನ್ನಾಗಿ ನಿದ್ರಿಸಬೇಕು. ಆದರೆ ಮಲಗುವ ಭಂಗಿ ಸರಿಯಾಗದೇ ಬಿಕ್ಕಟ್ಟು ಎದುರಾಗುತ್ತದೆ. ಇದು ಗರ್ಭಿಣಿ ಮತ್ತು ಹೊಟ್ಟೆಯಲ್ಲಿರುವ ಮಗು ಇಬ್ಬರಿಗೂ ಸಮಸ್ಯೆ ಉಂಟುಮಾಡಬಹುದು.
ಗರ್ಭಿಣಿ ಮಹಿಳೆ ತನ್ನ ಬೆನ್ನಿನ ಮೇಲೆ ಅಥವಾ ಹೊಟ್ಟೆಯನ್ನು ಅಡಿಮೇಲು ಮಾಡಿಕೊಂಡು ಮಲಗಬಾರದು. ಈ ರೀತಿ ಮಲಗುವುದರಿಂದ ಗರ್ಭಾಶಯ, ಬೆನ್ನು, ಬೆನ್ನುಮೂಳೆ ಮತ್ತು ಕರುಳಿನ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ದೇಹದಲ್ಲಿನ ರಕ್ತದ ಹರಿವಿನ ಮೇಲೆ ಕೂಡ ಪರಿಣಾಮ ಬೀರುತ್ತದೆ. ಗರ್ಭಿಣಿಗೆ ಸ್ನಾಯು ನೋವು ಅಥವಾ ಸೆಳೆತದಂತಹ ಸಮಸ್ಯೆಗಳಾಗಬಹುದು.
ಮಲಗುವಾಗ ದಿಂಬನ್ನು ಈ ರೀತಿ ಇರಿಸಿ!
ಗರ್ಭಿಣಿ ಮಹಿಳೆ ತನ್ನ ಎಡಭಾಗದಲ್ಲಿ ಮಲಗಬೇಕು ಮತ್ತು ಅವಳ ಮೊಣಕಾಲುಗಳ ನಡುವೆ ಕನಿಷ್ಠ ಎರಡು ದಿಂಬುಗಳನ್ನು ಇಡಬೇಕು. ಇದು ಮೂತ್ರಕೋಶ, ಗರ್ಭಾಶಯ, ಯೋನಿ ಮತ್ತು ಗುದನಾಳಕ್ಕೆ ಸಂಬಂಧಿಸಿದ ಸ್ನಾಯುಗಳ ಮೇಲೆ ಕಡಿಮೆ ಒತ್ತಡವನ್ನು ಉಂಟುಮಾಡುತ್ತದೆ. ಇದಲ್ಲದೆ ಬೆನ್ನುನೋವಿನಿಂದ ಪರಿಹಾರವನ್ನು ನೀಡುತ್ತದೆ. ಈಗ ಪ್ರೆಗ್ನೆನ್ಸಿ ದಿಂಬುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಮಲಗುವ ಮುನ್ನ ಏನನ್ನು ತಿನ್ನಬೇಕು?
ಗರ್ಭಿಣಿಯರು ಮಲಗುವ ಮುನ್ನ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಬಾರದು. ಅತಿಯಾಗಿ ದ್ರವ ಪದಾರ್ಥ ಸೇವಿಸಿದರೆ ರಾತ್ರಿ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಬಹುದು, ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಆದರೆ ದಿನದಲ್ಲಿ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ಗರ್ಭಿಣಿಯರು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು. ಇದರಿಂದ ಅಸಿಡಿಟಿ, ಎದೆಯುರಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ರಾತ್ರಿ ಹಸಿವು ಎನಿಸಿದರೆ ಒಂದು ಕಪ್ ಬೆಚ್ಚಗಿನ ಹಾಲನ್ನು ಕುಡಿಯಬೇಕು. ಇದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.