ಮೈಸೂರು : ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಭಕ್ತರು ಕೆಲವು ನಿಯಮಗಳನ್ನು ಪಾಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ರೋಪ್ ವೇ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ಪರಿಸರವಾದಿಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಹಿಂದೆಯೇ ಸ್ಥಗಿತಗೊಳಿಸಲಾಗಿದೆ.
ದೇವಾಲಯಗಳಲ್ಲಿ ಅಗತ್ಯವಿರುವೆಡೆ ಸಿಸಿಟಿವಿ ಅಳವಡಿಸಬೇಕೆಂದು ತೀರ್ಮಾನಿಸಿ, ಯೂನಿಯನ್ ಬ್ಯಾಂಕ್ ನವರು ಸಿಎಸ್ಆರ್ ನಿಧಿಯಿಂದ ಸಿಸಿ ಟಿವಿಗಳ ಅಳವಡಿಕೆಗೆ ಸಹಕಾರ ನೀಡಲಿದ್ದಾರೆ. ದೇವಸ್ಥಾನದ ಸುತ್ತಮುತ್ತ ದೀಪದ ವ್ಯವಸ್ಥೆಗೊಳಿಸುವ ಜೊತೆಗೆ ಈ ಪ್ರದೇಶದಲ್ಲಿ ಅಪರಾಧಗಳನ್ನು ನಿಗ್ರಹಿಸಲು ಒಂದು ಟಾಸ್ಕ್ ಫೋರ್ಸ್ ಅನ್ನು ರಚನೆ ಮಾಡಲಾಗುವುದು. ಚಾಮುಂಡಿ ಬೆಟ್ಟದ ಮೇಲೆ ಧೂಮಪಾನ, ಮದ್ಯಪಾನ, ಗುಟ್ಕಾ ಸೇವನೆ ಸಂಪೂರ್ಣ ನಿಷೇದಿಸಲಾಗಿದೆ.
ಬೆಟ್ಟದ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಪ್ರಸಾದ ಯೋಜನೆಯನ್ನು ಕೇಂದ್ರ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದ್ದು, ಈ ಯೋಜನೆಗೆ ಹೆಚ್ಚುವರಿಯಾಗಿ ಬೇಕಾಗುವ 11 ಕೋಟಿ ರೂ.ಗಳನ್ನು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಿಂದ ಭರಿಸಲಾಗುವುದು. ದೇವಾಲಯದ ಒಳಗೆ ಛಾಯಾಗ್ರಹಣವನ್ನು ನಿಷೇದಿಸಲಾಗಿದ್ದು, ಮೊಬೈಲ್ ಗಳನ್ನು ಬಂದ್ ಮಾಡಿಕೊಳ್ಳುವ ಆದೇಶ ನೀಡಲಾಗುವುದು.
ಪ್ರಾಧಿಕಾರದಲ್ಲಿ ಒಟ್ಟು 169.22 ಕೋಟಿ ಲಭ್ಯವಿದ್ದು, ದೇವಾಲಯದ ಉಳಿತಾಯ ಖಾತೆಯಲ್ಲಿ 20.24 ಕೋಟಿ ರೂ.ಗಳು ಲಭ್ಯವಿದೆ. 2023-24 ರಲ್ಲಿ 49.64 ಕೋಟಿ ರೂ.ಗಳ ಆದಾಯ, 28.18 ಕೋಟಿ ನಿವ್ವಳ ಆದಾಯ ಬಂದಿದೆ. ಜುಲೈ ಕೊನೆಯವರೆಗೆ 17.4 ಕೋಟಿ ಆದಾಯ ಬಂದಿದ್ದು, 6.97 ಕೋಟಿ ವೆಚ್ಚವಾಗಿದೆ. ಪ್ರತಿ ವರ್ಷ ಆದಾಯ ಹೆಚ್ಚಾಗುತ್ತಿದೆ. ಅಂದರೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿರುವ ದೇವಿಕೆರೆ, ನಂದಿ ಪ್ರತಿಮೆ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದೆ. ಶಾಸಕರು ಹಾಗೂ ಸಚಿವರು ವ್ಯಕ್ತ ಮಾಡಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಕೆಲಸ ಮಾಡುತ್ತದೆ. ಬೆಟ್ಟಕ್ಕೆ ಬರುವ ಮೆಟ್ಟಿಲುಗಳನ್ನು ಅಭಿವೃದ್ಧಿಪಡಿಲಾಗುವುದು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಎಲ್ಲಾ ಜಾತಿ, ಧರ್ಮದವರು ದೇವಸ್ಥಾನಕ್ಕೆ ಬರಬಹುದು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಲಾಗಿದೆ. ಚಾಮುಂಡೇಶ್ವರಿ ಪ್ರಾಧಿಕಾರವನ್ನು ಸರ್ಕಾರ ರಚಿಸಿದ್ದು, ಹಿಂದೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಡಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಮತ್ತು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದರು. ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ರಚನೆಯಾಗಿದೆ. ಹುಲಿಗೆಮ್ಮ ದೇವಸ್ಥಾನ ಮಹದೇಶ್ವರ ದೇವಸ್ಥಾನ, ಸವದತ್ತಿಯ ಯಲ್ಲಮ್ಮ, ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೂ ಪ್ರಾಧಿಕಾರವನ್ನು ಸರ್ಕಾರ ರಚಿಸಿದೆ.