ಹೈದರಾಬಾದ್: ಶಿಶುವಿಹಾರದಲ್ಲಿ ಓದುತ್ತಿದ್ದ ನಾಲ್ಕು ವರ್ಷದ ಕಂದಮ್ಮನ ಮೇಲೆ ಆ ಶಾಲೆಯ ಪ್ರಾಂಶುಪಾಲರ ಚಾಲಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಇಲ್ಲಿಯ ಐಷಾರಾಮಿ ಬಂಜಾರಾ ಹಿಲ್ಸ್ ಪ್ರದೇಶದ ಡಿಎವಿ ಪಬ್ಲಿಕ್ ಸ್ಕೂಲ್ನಲ್ಲಿ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ಚಾಲಕನನ್ನು ಬಂಧಿಸಲಾಗಿದೆ. ಈತ ತನಗೆ ಸತತ ಎರಡು ತಿಂಗಳುಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದುದಾಗಿ ಬಾಲಕಿ ತಿಳಿಸಿದ ನಂತರ ಚಾಲಕನನ್ನು ಹಿಡಿದು ಥಳಿಸಲಾಗಿದೆ.
ಹುಡುಗಿಯ ಪೋಷಕರು ಮಗಳ ನಡವಳಿಕೆಯಲ್ಲಾದ ಬದಲಾವಣೆಯನ್ನು ಗಮನಿಸಿದ್ದರು. ಬಾಲಕಿ ಏನೂ ಮಾತನಾಡದೇ ಖಿನ್ನತೆಗೆ ಒಳಗಾಗಿದ್ದಳು ಹಾಗೂ ಪದೇ ಪದೇ ಅಳುತ್ತಿದ್ದಳು. ಇದನ್ನು ಆಕೆಯ ತಾಯಿ ಗಮನಿಸಿದ್ದರೂ ಬಾಲಕಿ ಏನೂ ಹೇಳಿರಲಿಲ್ಲ. ನಂತರ ಕೇಳಿದಾಗ ಆಕೆ ವಿಷಯ ತಿಳಿಸಿದ್ದಾಳೆ. ಕೂಡಲೇ ಬಾಲಕಿಯ ಹೆತ್ತವರು ಹಾಗೂ ಇತರ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಬಾಲಕಿಯೊಂದಿಗೆ ಪೋಷಕರು ಶಾಲೆಗೆ ಹೋದಾಗ ಬಾಲಕಿ ಚಾಲಕನ ಕಡೆಗೆ ಕೈ ತೋರಿಸಿದಳು. ಆ ನಂತರ ಚಾಲಕನನ್ನು ಥಳಿಸಲಾಗಿದೆ. ಬಾಲಕಿಯನ್ನು ಕೌನ್ಸೆಲಿಂಗ್ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಅವಳು ತನಗಾದ ನೋವನ್ನು ಹೇಳಿಕೊಂಡಿದ್ದಾಳೆ.