alex Certify 2024-25ನೇ ಸಾಲಿಗೆ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ : CM ಸಿದ್ದರಾಮಯ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2024-25ನೇ ಸಾಲಿಗೆ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ : CM ಸಿದ್ದರಾಮಯ್ಯ ಮಾಹಿತಿ

ಬೆಂಗಳೂರು : 2024-25ನೇ ಸಾಲಿಗೆ  3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಕಳೆದ ವರ್ಷದ ಬಜೆಟ್ ಗಾತ್ರ 3,27,747 ಕೋಟಿ ರೂ.ಇತ್ತು. ಕಳೆದ ಬಜೆಟ್ ಗಿಂತ 46,636 ಕೋಟಿ ರೂ. ಗಾತ್ರ ಹೆಚ್ಚಾಗಿದೆ.  ಜುಲೈನಲ್ಲಿ ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಬೆಳವಣಿಗೆಯಲ್ಲಿ ಶೇ.13 ರಷ್ಟು ಬೆಳವಣಿಗೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಈ ವರ್ಷ 36,000 ಕೋಟಿ ರೂ. ಗ್ಯಾರಂಟಿಗಳಿಗೆ ಕೊಟ್ಟಿದ್ದರೂ ಕೂಡ ಅಭಿವೃದ್ಧಿಗೂ ಅನುದಾನವನ್ನು  ಮೀಸಲಿರಿಸಿದ್ದೇವೆ. 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಸುಮಾರು 35,000 ಕೋಟಿ ರೂ. ಕೃಷಿ ಉತ್ಪಾದನೆಯಲ್ಲಿ ನಷ್ಟವಾಗಿದೆ. 18,171 ಕೋಟಿ ರೂ.ಗಳನ್ನು ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಬರಪರಿಹಾರವನ್ನು ಕೇಂದ್ರ ಸರ್ಕಾರದಿಂದ  ಕೋರಲಾಗಿದೆ. ಎನ್.ಡಿ.ಆರ್ ಎಫ್ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗದವರು. ಅದು ರಾಜ್ಯದಿಂದ ಸಂಗ್ರಹಿಸಿರುವ ಹಣ. ಕೇಂದ್ರ ಸರ್ಕಾರದ ಅನುದಾನವಲ್ಲ. ಐದು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ, ಸಭೆಯನ್ನೂ ಕರೆದಿಲ್ಲ ಎಂದರು.

ರಾಜ್ಯದ ಬಡವರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ವರ್ಗದವರು, ಅಲ್ಪಸಂಖ್ಯಾತರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುವ ಪ್ರಯತ್ನ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಪ್ರಯತ್ನವೂ ಬಜೆಟ್ ನಲ್ಲಿ ಆಗಿದೆ ಎಂದು ತಿಳಿಸಿದರು.

ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಸಮಸ್ಯೆಗಳಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಲು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ.  ಈ ಆರ್ಥಿಕ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗುವ ಮೊದಲೇ ಜನತೆಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇದರೊಂದಿಗೆ ಕೃಷಿ, ನೀರಾವರಿ, ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ಧಿ, ಬರಗಾಲ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ  ಹಾಗೂ ಅಭಿವೃದ್ಧಿಗೆ ಹಣ ಕೊಡುವ ಕೆಲಸವನ್ನೂ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಬಜೆಟ್ ಓದಲು ಪ್ರಾರಂಭ ಮಾಡಿದ ಕೂಡಲೇ ಸುನೀಲ್ ಕುಮಾರ್ ಅವರು ಏನಿಲ್ಲ ಏನಿಲ್ಲ ಎಂದು ಘೋಷಣೆ ಕೂಗುತ್ತಿದ್ದರು. ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ. ಕಾಮಾಲೆ ರೋಗಿಗಳಿಗೆ ಕಂಡಿದ್ದೆಲ್ಲಾ ಹಳದಿಯಂತೆ ಆಗಿದೆ. ರಾಜಕೀಯ ಹೇಳಿಕೆ ಬೇಡ ಎನ್ನುವುದಿಲ್ಲ. ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು. ಪ್ರಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡುತ್ತಾರೆ. ಪ್ಲಕಾರ್ಡ್ ಹಿಡಿದಿದ್ದರು. ಬಜೆಟ್ ಕೇಳಬಾರದು ಎಂದು ಯೋಚಿಸಿಕೊಂಡೇ ಬಂದಿದ್ದರು. ನಾನು ವಸ್ತುಸ್ಥಿತಿಯನ್ನು ಹೇಳಿದರೆ ಅವರಿಗೆ ಅದು ನುಂಗಲಾರದ ತುತ್ತು. ಸತ್ಯ ಹೇಳಿದರೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯವನ್ನು  ಜನರಿಗೆ ಹೇಳುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಅವರು ಕೂಡ ಕೋಲೆಬಸವನ ಹಾಗೆ ತಲೆ ಅಲ್ಲಾಡಿಸದೇ ಕೇಂದ್ರದವರನ್ನು ಕೇಳಬೇಕಿತ್ತು. ಕೋಲಾರ ಸಂಸದರಾದ ಮುನಿಸ್ವಾಮಿಯವರು ಸಂಸತ್ತಿನಲ್ಲಿ ಒಂದು ದಿನವೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಬಾಯಿ ಬಿಡಲಿಲ್ಲ. ಐದು ವರ್ಷದಲ್ಲಿ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಅವರು ಸಂಸದರಾಗಲು ಲಾಯಕ್ಕೇ?

ಕೇಂದ್ರ ಸರ್ಕಾರದಿಂದ ನ್ಯಾಯಯುತವಾದದ್ದು ಕೇಳಲು ಇವರಿಗೆ ಸಾಧ್ಯವಿಲ್ಲ ಎಂದರೇ ಏನು ಸೂಚಿಸುತ್ತದೆ.  ನಾನು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಕೇಂದ್ರದ ಅನುದಾನವನ್ನು ಪಡೆಯಿರಿ ಎಂದು ಒತ್ತಾಯಿಸಿದ್ದೆ. 15ನೇ ಹಣಕಾಸು ಆಯೋಗದವರು ಶಿಫಾರಸು ಮಾಡಿದ್ದ 5,495 ಕೋಟಿ ರೂ. ವಿಶೇಷ ಅನುದಾನ ಪಡೆಯಲು ಹೇಳಿದ್ದೆ. ಬೆಂಗಳೂರು ಅಭಿವೃದ್ಧಿಗೆ 6,000 ಕೋಟಿ ಕೊಟ್ಟಿದ್ದಾರೆ. ಅದನ್ನು ಪಡೆಯಿರಿ ಎಂದು ಹೇಳಿದ್ದೆ. ಒಟ್ಟು  11,495 ಕೋಟಿ ರೂ. ಶಿಫಾರಸ್ಸು ಮಾಡಿರುವುದನ್ನು ಒತ್ತಾಯ ಮಾಡಿ ಎಂದು ಅವರಿಗೆ ಆಗ್ರಹಿಸಿದ್ದೆ ಎಂದರು.

ಕನ್ನಡಿಗರಿಗೆ ಅನ್ಯಾಯವಾದರೂ ಸುಮ್ಮನಿರಬೇಕೇ? ಭದ್ರಾ ಮೇಲ್ದಂಡೆಗೆ 2023-24 ಕೇಂದ್ರ ಬಜೆಟ್ ನಲ್ಲಿ ರೂ.5,300 ಕೋಟಿ ಕೊಡುತ್ತೇವೆ ಎಂದಿದ್ದರು. ಅದನ್ನೇ ಇಲ್ಲಿನ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ ನರೇಂದ್ರ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ಹೇಳಿದವರು ಇವರೇ ಆದರೆ ಇನ್ನೂ ಆಗಿಲ್ಲವೆಂದರೆ ಅವರಿಗೆ ಕೋಪ ಏಕೆ? ಇದು ಕನ್ನಡ ಜನರಿಗೆ ಮಾಡುತ್ತಿರುವ ದ್ರೋಹ. ಇದು ಪ್ರಜಾಪ್ರಭುತ್ವದ ವಿರೋಧವಲ್ಲವೇ?

ನಾನು ಈ ವರ್ಷ ಗ್ಯಾರಂಟಿಗಳಿಗೆ ರೂ.36,000 ಕೋಟಿ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿಲ್ಲ ಎಂದು ಸಾಬೀತು ಮಾಡಲಿ. ಚರ್ಚೆ ಮಾಡಬಹುದಿತ್ತು. ಅದಕ್ಕೆ ಇವರ ತಲೆಯಲ್ಲಿ ಏನೂ ಇಲ್ಲ, ರಾಜಕೀಯ ಮಂಜು ಕವಿದಿದೆ. ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ.

ಸಾಲ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನಾನು ಸ್ವಾತಂತ್ರ್ಯ ಬಂದಾಗಿನಿಂದ ಹಣಕಾಸಿನ ಮಂತ್ರಿಯಾಗಿರುವವರೆಗೆ ಈ ರಾಜ್ಯದ  ಮೇಲೆ 2,46,000 ಕೋಟಿ ಸಾಲವಿದ್ದು , ನಾನು ಮಾಡಿರುವುದು 1.12 ಲಕ್ಷ  ಕೋಟಿ ರೂ.ಗಳು ಮಾತ್ರ. ಇವರ ಬಜೆಟ್ ನಲ್ಲಿ ಕಳೆದ ವರ್ಷ 80 ಸಾವಿರ ಕೋಟಿ ರೂ.ಗಳ ಸಾಲ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...