
ಪಾಲಿಥಿನ್‌ಗಳು ನಮ್ಮ ದೇಹಕ್ಕೆ ಸುರಕ್ಷಿತವಲ್ಲ. ಆದರೂ ಹಣ್ಣು-ತರಕಾರಿ, ಜ್ಯೂಸ್, ಬಿಸ್ಕೆಟ್ ಹೀಗೆ ಅನೇಕ ವಸ್ತುಗಳನ್ನು ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಲಾಗುತ್ತದೆ. ಇವುಗಳನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ನಮ್ಮನ್ನು ಆವರಿಸಿಕೊಳ್ಳಬಹುದು. ಇಂಥದ್ದೊಂದು ಆಘಾತಕಾರಿ ವರದಿಯನ್ನು ಆಗ್ರಾದ ಎಸ್‌ಎನ್ ಮೆಡಿಕಲ್ ಕಾಲೇಜಿನ ಅಧ್ಯಯನದಲ್ಲಿ ಬಹಿರಂಗಪಡಿಸಲಾಗಿದೆ.
ಅಷ್ಟೇ ಅಲ್ಲ ಈ ರೀತಿಯ ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ಸೇವಿಸುವುದರಿಂದ ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹದ ಸಾಧ್ಯತೆ ಕೂಡ ಹೆಚ್ಚಾಗಲಿದೆ ಎಂಬುದು ಅಧ್ಯಯನದಲ್ಲಿ ದೃಢಪಟ್ಟಿದೆ.
ಮಧುಮೇಹದ ಇತರ ಕಾರಣಗಳನ್ನು ಕಂಡುಹಿಡಿಯಲು ವೈದ್ಯಕೀಯ ಇಲಾಖೆ ಗರ್ಭಿಣಿಯರ ಮೇಲೆ ಅಧ್ಯಯನ ನಡೆಸಿದೆ. 50 ಗರ್ಭಿಣಿಯರ ಪೈಕಿ ಐವರಿಗೆ ಜೆಸ್ಟೇಶನಲ್ ಡಯಾಬಿಟಿಸ್ ಇರುವುದು ಪತ್ತೆಯಾಗಿದೆ. ಶೇ.4 ರಿಂದ 18 ರಷ್ಟು ಗರ್ಭಿಣಿಯರು ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೆ ಹೆರಿಗೆಯ ನಂತರ 90 ಪ್ರತಿಶತ ಮಹಿಳೆಯರಲ್ಲಿ ಈ ಮಧುಮೇಹವು ತಂತಾನೇ ನಿವಾರಣೆಯಾಗುತ್ತದೆ.
ಜೆಸ್ಟೇಶನಲ್ ಡಯಾಬಿಟಿಸ್‌ನಿಂದ ಬಳಲುತ್ತಿರುವ ಮಹಿಳೆಯರಿಗೆ ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ತಿನ್ನುವ ಅಭ್ಯಾಸವಿದೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್ ಮತ್ತು ಬೌಲ್‌ಗಳಲ್ಲಿ ಆಹಾರವನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ತರಕಾರಿ, ಬೇಳೆಕಾಳುಗಳು, ಜ್ಯೂಸ್, ಪಾಲಿಥಿನ್‌ನಲ್ಲಿ ಪ್ಯಾಕ್ ಮಾಡಿದ ಬಿಸ್ಕತ್ತುಗಳನ್ನು ತಿನ್ನುವುದರಿಂದ ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹ ಬರುತ್ತಿದೆ.
ಪ್ಲಾಸ್ಟಿಕ್ ಮಧುಮೇಹದ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?
ಪ್ಲಾಸ್ಟಿಕ್ ಮತ್ತು ಪಾಲಿಥಿನ್‌ನಲ್ಲಿ ‘ಬಿಸ್ಫೆನಾಲ್-ಎ’ (ಬಿಪಿಎ) ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕವು ಆಹಾರದೊಂದಿಗೆ ಬೆರೆತು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಬೇಗನೆ ಮಧುಮೇಹದಂತಹ ಕಾಯಿಲೆಗಳು ಬರುತ್ತವೆ.
ಬಿಸ್ಫೆನಾಲ್ ಎ ಎಂಬುದು ಹಾರ್ಮೋನ್‌ಗೆ ಅಡ್ಡಿಪಡಿಸುವ ರಾಸಾಯನಿಕವಾಗಿದೆ. ಇದು ದೇಹದ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್ ಉತ್ಪಾದನೆಗೆ ಅಡ್ಡಿಮಾಡುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. BPA ಪರಿಣಾಮದಿಂದಾಗಿ ರಕ್ತದಲ್ಲಿನ ಸಕ್ಕರೆಯ ಅಪಾಯವು ಹೆಚ್ಚಾಗಬಹುದು ಮತ್ತು ಮಧುಮೇಹ ಬರಬಹುದು.
ಗರ್ಭಿಣಿಯರು ಏನು ಮಾಡಬೇಕು?
ತಜ್ಞರ ಪ್ರಕಾರ ಗರ್ಭಿಣಿಯರು ಪ್ಲಾಸ್ಟಿಕ್ ಪದಾರ್ಥಗಳಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ತ್ಯಜಿಸಬೇಕು. ಮನೆಯಲ್ಲಿ ಆಹಾರವನ್ನು ಬೇಯಿಸಬೇಕು. ಸ್ಟೀಲ್, ಗಾಜು ಅಥವಾ ಮಣ್ಣಿನ ಪಾತ್ರೆಗಳಲ್ಲಿ ತಿನ್ನಬೇಕು. ಗರ್ಭಿಣಿಯರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದನ್ನು ತಪ್ಪಿಸಬೇಕು. ಸ್ಟೀಲ್ ಅಥವಾ ಗಾಜಿನ ಬಾಟಲಿಗಳಲ್ಲಿ ನೀರು ಕುಡಿಯುವುದು ಸೂಕ್ತ.