ಪರಾಠ ನೀಡಲು ನಿರಾಕರಿಸಿದ್ದಕ್ಕೆ ಸಣ್ಣ ಹೋಟೆಲ್ ಒಂದರ ಮಾಲೀಕನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹೊಸ ವರ್ಷದ ದಿನದಂದು ಮಧ್ಯರಾತ್ರಿ ಹೋಟೆಲ್ ಬಳಿ ಬಂದ ಆರೋಪಿಗಳಿಬ್ಬರು, ಮಾಲೀಕನ ಬಳಿ ಪರಾಠ ಸರ್ವ್ ಮಾಡು ಎಂದು ಕೇಳಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಪ್ರಸ್ತುತ ರಾತ್ರಿ 11 ರಿಂದ ಬೆಳಗ್ಗಿನ ಐದು ಗಂಟೆಯವರೆಗೆ ನೈಟ್ ಕರ್ಫ್ಯೂ ಇರುವುದರಿಂದ ಆಹಾರ ನೀಡಲು ಮಾಲೀಕ ನಿರಾಕರಿಸಿದ್ದಕ್ಕೆ ಕೋಪಗೊಂಡ ಆರೋಪಿಗಳು, ಹೋಟೆಲ್ ಮಾಲೀಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಅಲ್ಲಿಂದ ತೆರಳಿದ್ದಾರೆ.
ಮತ್ತೆ ಮುಂಜಾನೆ 3.30ಕ್ಕೆ ನೋಯ್ಡಾದ, ಪರಿ ಚೌಕ್‌ನ ಓಮ್ಯಾಕ್ಸ್ ಆರ್ಕೇಡ್‌ನಲ್ಲಿರುವ ಫುಡ್ ಜಾಯಿಂಟ್‌ಗೆ ಬಂದೂಕು ಸಮೇತ ಹಿಂದಿರುಗಿದ ಇಬ್ಬರು ಆರೋಪಿಗಳು, ಮಾಲೀಕನ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಹೋಟೆಲ್ ಮಾಲೀಕನನ್ನು 27 ವರ್ಷದ ಹಾಪುರ್ ನ ನಿವಾಸಿ ಕಪಿಲ್ ಎಂದು ಗುರುತಿಸಲಾಗಿದೆ.
ಪರಿ ಚೌಕ್ ಬಳಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂಬ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗುಂಡು ತಗುಲಿದ್ದ ಕಪಿಲ್ ನನ್ನ ಆಸ್ಪತ್ರೆಗೆ ದಾಖಲಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಾಶ್ ಹಾಗೂ ಯೋಗೆಂದ್ರ ಎಂಬ ಇಬ್ಬರನ್ನ ಬಂಧಿಸಲಾಗಿದೆ. ಬಂಧಿತರ ವಿರುದ್ಧ, ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 34ರ (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೆಲ ದಿನಗಳಲ್ಲೆ ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.