ಕಳೆದು ಹೋದ ಫೋನ್ ಗಾಗಿ ಛತ್ತೀಸ್‌ಗಢ ಜಲಾಶಯದಿಂದ 21 ಲಕ್ಷ ಲೀಟರ್ ನೀರು ಹರಿಸಿದ ಆಹಾರ ನಿರೀಕ್ಷಕನನ್ನು ಅಮಾನತು ಮಾಡಲಾಗಿದೆ.
ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 32 ವರ್ಷದ ಆಹಾರ ನಿರೀಕ್ಷಕನನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಅವರು ಇತ್ತೀಚೆಗೆ 95,000 ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಎಸ್ 23 ಅಲ್ಟ್ರಾ ಫೋನ್ ಖರೀದಿಸಿದ್ದರು. ಕಳೆದ ಭಾನುವಾರ ಪಖಂಜೂರು ಪಟ್ಟಣದಲ್ಲಿ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ತನ್ನ ಸ್ನೇಹಿತರೊಂದಿಗೆ ಪಖಂಜೂರಿನ ಪರ್ಕೋಟ್ ಜಲಾಶಯಕ್ಕೆ ವಿಹಾರಕ್ಕೆ ತೆರಳಿದ್ದರು. ಅಣೆಕಟ್ಟೆಯಿಂದ ತುಂಬಿ ಹರಿಯುವ ನೀರು ಪಾರಕೋಟ ಜಲಾಶಯಕ್ಕೆ ಹರಿದು ಬರುತ್ತದೆ.
ಸೆಲ್ಫಿ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ತನ್ನ ಫೋನ್ ಅನ್ನು ವಿಶ್ವಾಸ್ ಜಲಾಶಯಕ್ಕೆ ಬೀಳಿಸಿದ್ದಾರೆ. ಈತ ಸ್ಥಳೀಯ ನಿವಾಸಿಯಾಗಿರುವುದರಿಂದ ಈಜು ಬಲ್ಲ ಕೆಲವು ಗ್ರಾಮಸ್ಥರು 10 ಅಡಿ ಆಳದ ಜಲಾಶಯದಲ್ಲಿ ಧುಮುಕಿ ಆತನ ಫೋನ್‌ಗಾಗಿ ಹುಡುಕಾಡಿದರೂ ಎರಡು ದಿನವಾದರೂ ಪತ್ತೆಯಾಗಿರಲಿಲ್ಲ.
ಮಂಗಳವಾರದವರೆಗೂ ಫೋನ್ ಸಿಗದ ಕಾರಣ ನೀರನ್ನು ಕೆಲವು ಅಡಿಗಳಷ್ಟು ಹರಿಸಬಹುದು. ಇದರಿಂದ ಫೋನ್ ಸಿಗುತ್ತದೆ, ಅಲ್ಲದೇ ಮೀನು ಹಿಡಿಯಲು ಸಾಧ್ಯವಾಗುತ್ತದೆ ಎಂದು ಹೇಳಿ 7,500 ರೂ.ಗೆ ಡೀಸೆಲ್ ಪಂಪ್ ಬಾಡಿಗೆಗೆ ಪಡೆದುಕೊಂಡು ಎರಡು ದಿನಗಳ ಅವಧಿಯಲ್ಲಿ 10 ಅಡಿ ಆಳದ ಜಲಾಶಯದಿಂದ ಸುಮಾರು ಮೂರು ಅಡಿ ನೀರನ್ನು ಹೊರತೆಗೆಸಿದ್ದಾರೆ.
ಕಂಕೇರ್ ಜಿಲ್ಲಾಧಿಕಾರಿ ಡಾ.ಪ್ರಿಯಾಂಕಾ ಶುಕ್ಲಾ ಮಾತನಾಡಿ, ನೀರನ್ನು ಹೊರಹಾಕಲು ಅಧಿಕಾರಿಗೆ ಅಧಿಕಾರವಿಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಈ ನೀರನ್ನು ಗ್ರಾಮಸ್ಥರು ಮತ್ತು ಪ್ರಾಣಿಗಳು ಬಳಸಬಹುದಾಗಿದ್ದು, ಯಾವುದೇ ಅಧಿಕಾರಿಯು ಪೂರ್ವಾನುಮತಿ ಇಲ್ಲದೆ ಸ್ವಯಂಪ್ರೇರಿತವಾಗಿ ಇಂತಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.